ಕಳಪೆ ಹೆಲ್ಮೆಟ್ ಧರಿಸಿದ್ರೆ ವಿಮೆ ಹಣ ಸಿಗಲ್ಲ; ಸಿಟಿ ಮಾತ್ರವಲ್ಲ ಹಳ್ಳಿಯಲ್ಲೂ ಹೆಲ್ಮೆಟ್ ಕಡ್ಡಾಯ

No Insurance Apply For Wearing Fake Helmet Accidents
Highlights

ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ 10 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಅಪಘಾತಗಳ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ನೀತಿ ರೂಪಿಸಬೇಕು ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಜನ ಸಹ ಐಎಸ್‌'ಐ ಮುದ್ರೆ ಹೊಂದಿದ ಹೆಲ್ಮೆಟ್ ಧರಿಸಬೇಕು. ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕೆಂದು ತೀರ್ಪಿನಲ್ಲಿ ನ್ಯಾಯಾಲಯ ಸಲಹೆ ನೀಡಿದೆ.

ಬೆಂಗಳೂರು(ಜ.10): ಬಿಐಎಸ್ ಅಥವಾ ಐಎಸ್‌'ಐ ಮುದ್ರೆ ಹೊಂದಿದ ಹೆಲ್ಮೆಟ್ ಧರಿಸದೇ ಅಪಘಾತಕ್ಕೊಳಗಾಗಿ ಜೀವ ಕಳಕೊಂಡರೆ ಅಥವಾ ಅಂಗ ಊನವಾದರೆ ಅಂಥ ವಾಹನ ಸವಾರರು ವಿಮಾ ಹಣ ಪಡೆಯಲು ಅರ್ಹರಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದೇ ವೇಳೆ, ರಾಜ್ಯದ ಮಹಾನಗರಗಳು ಮಾತ್ರವಲ್ಲ, ಕುಗ್ರಾಮದಲ್ಲೂ ಬೈಕ್ ಸವಾರರು ಐಎಸ್‌'ಐ ಪ್ರಮಾಣೀಕೃತ ಹೆಲ್ಮೆಟ್ ಹಾಗೂ ಕಾರು ಚಾಲಕರು ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು ಎಂದೂ ಹೇಳಿದೆ.

ಬಸ್ ಮತ್ತು ಬೈಕ್ ನಡುವಿನ ಅಪಘಾತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರಿಗೆ 2.5 ಲಕ್ಷ ರು. ಪರಿಹಾರ ನೀಡುವಂತೆ ಅಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಓರಿಯಂಟಲ್ ವಿಮಾ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಎಲ್. ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

ಮೋಟಾರು ಸೈಕಲ್ ಹಾಗೂ ಸ್ಕೂಟರ್ ಸೇರಿದಂತೆ ದ್ವಿಚಕ್ರ ವಾಹನಗಳ ಸವಾರರು ಕರ್ನಾಟಕದ ಯಾವುದೇ ಭಾಗದಲ್ಲೂ ಸಂಚರಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ. ರಸ್ತೆ ಅಪಘಾತಗಳ ವೇಳೆ ತಲೆಗೆ ಉಂಟಾಗುವ ಪೆಟ್ಟು ತಡೆಯುವುದೇ ಹೆಲ್ಮೆಟ್ ಹಾಕಿಕೊಳ್ಳುವುದರ ಮುಖ್ಯ ಉದ್ದೇಶ. ಆದರೆ, ನೆಪ ಮಾತ್ರಕ್ಕೆ ಹೆಲ್ಮೆಟ್ ಧರಿಸುವುದಲ್ಲ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 230ರನ್ವಯ ರಕ್ಷಣಾತ್ಮಕ ಹೆಲ್ಮೆಟ್ ಅನ್ನೇ ಹಾಕಿಕೊಳ್ಳಬೇಕು. ಆ ಹೆಲ್ಮೆಟ್ ಐಎಸ್‌'ಐ ಸಂಖ್ಯೆ 4151:1993 ಮುದ್ರೆಯನ್ನೇ ಹೊಂದಿರಬೇಕು. ಆದರೆ, ಹೆಚ್ಚಿನ ಜನ ಐಎಸ್‌'ಐ ಮುದ್ರೆ ಹೊಂದಿದ ಹೆಲ್ಮೆಟ್ ಧರಿಸುತ್ತಿಲ್ಲ. ಅಂತಹವರು ಅಪಘಾತದಲ್ಲಿ ಗಾಯಗೊಂಡರೆ ವಿಮೆ ಹಣ ಪಡೆಯಲು ಅರ್ಹರಾಗಿರುವುದಿಲ್ಲ ಹಾಗೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದೂ ತೀರ್ಪಿನಲ್ಲಿ ವಿವರಿಸಿದೆ. ಅಲ್ಲದೆ, ಹೆಲ್ಮೆಟ್ ಮೇಲೆ ತಯಾರಿಕಾ ಕಂಪನಿ ಹೆಸರು, ಉತ್ಪಾದಿಸಿದ ದಿನಾಂಕ, ವರ್ಷ ಹಾಗೂ ಗಾತ್ರದ ವಿವರ ನಮೂದಿಸಬೇಕು. ಮೇಲಾಗಿ ಈ ಎಲ್ಲಾ ವಿವರಗಳು ಅಳಿಸಿ ಹೋಗುವಂತಾಗಿರಬಾರದು ಹಾಗೂ ಸರಳವಾಗಿ ಓದುವಂತಿರಬೇಕು. ಸಂಚಾರಿ ಪೊಲೀಸರು ಇದನ್ನು ಪರಿಶೀಲಿಸುವುದು ಅವರ ಆದ್ಯ ಕರ್ತವ್ಯ. ಅಧೀನ ನ್ಯಾಯಾಲಯ ಮತ್ತು ನ್ಯಾಯಮಂಡಳಿಗಳು ಸಹ ಇಂತಹ ಪ್ರಕರಣಗಳಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಕೂಲಂಕಷವಾಗಿ ವಿಚಾರಣೆ ನಡೆಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಎನ್.ನರೇಶ್ ಬಾಬು ಮತ್ತು ಸಿ.ವಿ.ಜಯಂತ್ ಎಂಬುವರು 2014ರ ಮೇ 11ರಂದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಒಬಳಾಪುರ ಗ್ರಾಮದ ಬಳಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಿರುಮಲ ಬಸ್‌'ಗೆ ಡಿಕ್ಕಿ ಹೊಡೆದಿದ್ದರು. ಇದರಿಂದ ಸವಾರರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆಗೆ ಸುಮಾರು ಎರಡೂವರೆ ಲಕ್ಷ ರು. ಖರ್ಚಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ತುಮಕೂರಿನ ಹಿರಿಯ ಸಿವಿಲ್ ಮತ್ತು ಜೆಎಂಎಫ್‌'ಸಿ ನ್ಯಾಯಾಧೀಶರು ನರೇಶ್ ಬಾಬು ಮತ್ತು ಜಯಂತ್‌ಗೆ 2.58 ಲಕ್ಷ ರು. ಪರಿಹಾರ ನೀಡುವಂತೆ ತಿರುಮಲ ಬಸ್‌'ಗೆ ವಿಮೆ ನೀಡಿದ್ದ ಓರಿಯಂಟಲ್ ವಿಮಾ ಕಂಪನಿಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿಮಾ ಕಂಪನಿ, ದ್ವಿಚಕ್ರ ವಾಹನ ಸವಾರರು ಅಪಘಾತದ ವೇಳೆ ಐಎಸ್‌'ಐ ಮುದ್ರೆ ಹೊಂದಿದ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ಅವರು ಪರಿಹಾರ ಪಡೆಯಲು ಅರ್ಹರಲ್ಲ. ಅವರಿಗೆ ಪರಿಹಾರ ಘೋಷಿಸಿದ ಅಧೀನ ನ್ಯಾಯಾಲಯದ ಕ್ರಮ ಸರಿಯಲ್ಲ ಎಂದು ವಾದಿಸಿತ್ತು.

ಪ್ರತಿ ವರ್ಷ 10 ಸಾವಿರ ಸಾವು

ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ 10 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಅಪಘಾತಗಳ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ನೀತಿ ರೂಪಿಸಬೇಕು ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಜನ ಸಹ ಐಎಸ್‌'ಐ ಮುದ್ರೆ ಹೊಂದಿದ ಹೆಲ್ಮೆಟ್ ಧರಿಸಬೇಕು. ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕೆಂದು ತೀರ್ಪಿನಲ್ಲಿ ನ್ಯಾಯಾಲಯ ಸಲಹೆ ನೀಡಿದೆ.

loader