ಅಗರ್ತಲಾ: ದೇಶದ ಅತ್ಯಂತ ಬಡ ಸಿಎಂ ಎಂಬ ಹೆಗ್ಗಳಿಕೆ ಹೊಂದಿದ್ದ ಮಾಣಿಕ್‌ ಸರ್ಕಾರ್‌, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವುದರೊಂದಿಗೆ ವಾಸಕ್ಕೆ ಮನೆಯೂ ಇಲ್ಲದ ಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ ಅವರೀಗ ತಮ್ಮ ವಾಸ್ತವ್ಯವನ್ನು ಸಿಎಂಗೆ ನೀಡಲಾಗುವುದು ಅಧಿಕೃತ ಮನೆಯಿಂದ ಸಮೀಪದಲ್ಲೇ ಇರುವ ಸಿಪಿಎಂ ಕಚೇರಿಗೆ ವರ್ಗಾಯಿಸಿದ್ದಾರೆ.

ಸತತ 20 ವರ್ಷಗಳ ಕಾಲ ತ್ರಿಪುರ ಮುಖ್ಯಮಂತ್ರಿಯಾಗಿದ್ದ ಸರ್ಕಾರ್‌, ಮಾರ್ಕ್ಸ್‌-ಏಂಜಲ್ಸ್‌ ಸರನಿಯಲ್ಲಿದ್ದ ತಮ್ಮ ಅಧಿಕೃತ ನಿವಾಸವನ್ನು ಅಲ್ಲಿಂದ 500 ಮೀ. ದೂರವಿರುವ ಸಿಪಿಎಂ ಕಚೇರಿಗೆ ಸ್ಥಳಾಂತರಿಸಿದ್ದಾರೆ. ಕಚೇರಿಯ ಗೆಸ್ಟ್‌ ರೂಮ್‌ವೊಂದರಲ್ಲಿ ಪತ್ನಿ ಪಾಂಚಾಲಿ ಭಟ್ಟಾಚಾರ್ಯರೊಂದಿಗೆ ಉಳಿದುಕೊಳ್ಳಲಿದ್ದಾರೆ ಎಂದು ಪಕ್ಷದ ಕಾರ್ಯದರ್ಶಿ ಬಿಜಾನ್‌ ಧಾರ್‌ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 25 ವರ್ಷಗಳ ಕಾಲ ಆಡಳಿತ ನಡೆಸಿದ್ದ ಎಡರಂಗ ಸಿಪಿಎಂ ಪರಾಭವಗೊಂಡ ಹಿನ್ನೆಲೆ ಸರ್ಕಾರ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು.

ಅತ್ಯಂತ ಸರಳ ಜೀವನಶೈಲಿಯ ಮೂಲಕ ಅತ್ಯಂತ ಬಡ ಮುಖ್ಯಮಂತ್ರಿ ಎಂದೇ ಹೆಸರಾಗಿದ್ದ ಮಾಣಿಕ್‌ ಸರ್ಕಾರ್‌ ಇತ್ತೀಚೆಗೆ ಚುನಾವಣಾ ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಬಳಿ 1520 ರು. ನಗದು ಹಾಗೂ ಬ್ಯಾಂಕ್‌ ಖಾತೆಯಲ್ಲಿ 2410 ರು. ಮಾತ್ರ ಇರುವುದಾಗಿ ಘೋಷಿಸಿದ್ದರು. 1998ರಿಂದಲೂ ತ್ರಿಪುರ ಮುಖ್ಯಮಂತ್ರಿಯಾಗಿರುವ ಮಾಣಿಕ್‌ ಸರ್ಕಾರ್‌ ಬಳಿ ಸ್ವಂತ ಕಾರು, ಮನೆ, ಮೊಬೈಲ್‌ ಮತ್ತು ಯಾವುದೇ ಸ್ಥಿರಾಸ್ಥಿ ಕೂಡಾ ಹೊಂದಿಲ್ಲ. ಈ ಕಾರಣಕ್ಕಾಗಿಯೇ ದೇಶಾದ್ಯಂತ ಸುದ್ದಿಯಲ್ಲಿದ್ದರು. ಇವರ ಪತ್ನಿ ಕೇಂದ್ರ ಸರ್ಕಾರ ಹುದ್ದೆಯಲ್ಲಿದ್ದು, ಇದೀಗ ನಿವೃತ್ತರಾಗಿದ್ದಾರೆ.