Asianet Suvarna News Asianet Suvarna News

ಕೊಟ್ಟ ಮಾತು ತಪ್ಪಿತಾ ಸರ್ಕಾರ..?

ಕಳೆದ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದ ಶಾಲಾ-ಕಾಲೇಜು ಮಕ್ಕಳಿಗೆ ಉಚಿತ ಬಸ್‌ ಪಾಸು ನೀಡುವ ಯೋಜನೆಯನ್ನು ಆರ್ಥಿಕ ಹೊರೆ ಉಂಟಾಗಲಿದೆ. ಹೀಗಾಗಿ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳ ಲಾಗುವುದು ಎಂದು ನೂತನ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದ್ದಾರೆ.
 

No Free Bus Pass For Students
  • Facebook
  • Twitter
  • Whatsapp

ಬೆಂಗಳೂರು :  ಕಳೆದ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದ ಶಾಲಾ-ಕಾಲೇಜು ಮಕ್ಕಳಿಗೆ ಉಚಿತ ಬಸ್‌ ಪಾಸು ನೀಡುವ ಯೋಜನೆಯನ್ನು ಆರ್ಥಿಕ ಹೊರೆ ಉಂಟಾಗಲಿದೆ. ಹೀಗಾಗಿ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳ ಲಾಗುವುದು ಎಂದು ನೂತನ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸಚಿವರಾದ ನಂತರ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಳೆದ ಸರ್ಕಾರದ ಬಜೆಟ್‌ನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸು ನೀಡುವುದಾಗಿ ಹೇಳಲಾಗಿತ್ತು. ಆದರೆ, ಈ ಯೋಜನೆಯನ್ನು ಸದ್ಯದ ಸ್ಥಿತಿಯಲ್ಲಿ ಜಾರಿ ಮಾಡಲು ಅನುದಾನದ ಕೊರತೆ ಇದೆ. ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ವಾರದೊಳಗಾಗಿ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಪುನರ್‌ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.

ಸಾರಿಗೆ ನಿಗಮಗಳು ಈಗಾಗಲೇ 500 ಕೋಟಿ ರು. ನಷ್ಟದಲ್ಲಿವೆ. ಉಚಿತ ಪಾಸು ವಿತರಣೆ ಮಾಡಿದರೆ ಸಾರಿಗೆ ನಿಗಮಗಳಿಗೆ ವಾರ್ಷಿಕ 629 ಕೋಟಿ ರು. ಹೆಚ್ಚುವರಿ ಹೊರೆಯಾಗುತ್ತದೆ. ಕಾಂಗ್ರೆಸ್‌ ಸರ್ಕಾರದ ಘೋಷಣೆಯನ್ನು ಮೈತ್ರಿ ಸರ್ಕಾರ ಮಟ್ಟದಲ್ಲಿ ಮತ್ತೊಮ್ಮೆ ಪರಿಶೀಲನೆ ಮಾಡಬೇಕಾಗಿದೆ. ಹೀಗಾಗಿ ಉಚಿತ ಬಸ್‌ ಪಾಸ್‌ ವ್ಯವಸ್ಥೆ ಬಗ್ಗೆ ಮತ್ತೊಮ್ಮೆ ಚರ್ಚಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೂ ಚರ್ಚೆ ಮಾಡಲಾಗುವುದು ಎಂದು ಹೇಳಿದರು.

ಶಾಲಾ ಕಾಲೇಜುಗಳಲ್ಲೇ ಪಾಸು ವಿತರಣೆ:

ಈ ಬಾರಿ ಶಾಲಾ ಕಾಲೇಜುಗಳಲ್ಲಿಯೇ ವಿದ್ಯಾರ್ಥಿಗಳಿಗೆ ಪಾಸು ವಿತರಿಸಲಾಗುವುದು ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದರು. ಕಳೆದ ವರ್ಷದವರೆಗೆ ಬಿಎಂಟಿಸಿ ಕಚೇರಿಯ ಕೌಂಟರ್‌ನಲ್ಲಿ ಪಾಸ್‌ ನೀಡಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಪಾಸು ಪಡೆಯಲು ತೊಂದರೆ ಆಗುತ್ತಿತ್ತು. ಹೀಗಾಗಿ ಪ್ರಸಕ್ತ ಸಾಲಿನಿಂದ ಶಾಲಾ-ಕಾಲೇಜುಗಳಲ್ಲಿಯೇ ಪಾಸು ವಿತರಿಸುತ್ತೇವೆ. ಅಲ್ಲದೆ, ಮೊಬೈಲ್‌ ಆ್ಯಪ್‌ ಮೂಲಕ ವಿದ್ಯಾರ್ಥಿಗಳು ಪಾಸ್‌ಗೆ ಅರ್ಜಿ ಸಲ್ಲಿಸಲು ಸಹ ಅವಕಾಶ ಕಲ್ಪಿಸಲಾಗಿದೆ. ಅಂತಹವರಿಗೆ ಶಾಲಾ-ಕಾಲೇಜು ಅಥವಾ ನಿವಾಸದ ವಿಳಾಸಕ್ಕೆ ಪಾಸು ಕಳುಹಿಸಲಾಗುವುದು ಎಂದರು.

ಉಳಿದಂತೆ ಕಳೆದ ವರ್ಷ ವಿತರಿಸಿರುವ ಪಾಸು ಜೂನ್‌ ಅಂತ್ಯದವರೆಗೆ ಮಾನ್ಯ ಮಾಡಲಾಗುವುದು. ಹೀಗಾಗಿ ವಿದ್ಯಾರ್ಥಿಗಳು ಶಾಲಾ-ಕಾಲೇಜು ಆರಂಭವಾಗಿದ್ದರೂ ಸಮಸ್ಯೆ ಎದುರಿಸಬೇಕಾಗಿಲ್ಲ ಎಂದು ಭರವಸೆ ನೀಡಿದರು.

ಸಾರ್ವಜನಿಕ ಸಾರಿಗೆಗೆ ಪ್ರೋತ್ಸಾಹ:

ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ದೇಶದಲ್ಲೇ ಅತ್ಯುತ್ತಮ ಸ್ಥಾನ ಪಡೆದಿದೆ. ಹಾಗಂತ ನಾವು ಸುಮ್ಮನೆ ಕೂರುವುದಿಲ್ಲ. ನಗರದಲ್ಲಿನ ಮಾಲಿನ್ಯ ಹಾಗೂ ಸಂಚಾರ ದಟ್ಟಣೆ ಪ್ರೋತ್ಸಾಹಿಸಲು ಸಾರ್ವಜನಿಕ ಸಾರಿಗೆ ಬಗ್ಗೆ ಅರಿವು ಮೂಡಿಸಲಾಗುವುದು. ಪ್ರತಿಯೊಬ್ಬರೂ ಕಾರಿನಲ್ಲೇ ಪ್ರಯಾಣಿಸಬೇಕು ಎಂಬ ಧೋರಣೆ ಹೊಂದುತ್ತಿದ್ದಾರೆ. ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಜನ ಕಾರುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ರಸ್ತೆಗಳಲ್ಲಿ ಪಾರ್ಕಿಂಗ್‌ ಮಾಡುವವರಿಗೆ ಮುಂದಿನ ದಿನಗಳಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗೌಡ್ರದು, ನಮ್ಮದು ಒಂದೇ ಕುಟುಂಬ ಅಲ್ಲ

ನಾನು ದೇವೇಗೌಡರ ಕುಟುಂಬಕ್ಕೆ ಸೇರಿದವನಲ್ಲ. ನನ್ನ ಮಗಳನ್ನು ಅವರ ಮನೆಗೆ ಕೊಟ್ಟಿದ್ದೇನೆ. ಅವರ ಸಂಬಂಧಿಕನೇ ಹೊರತು ಕುಟುಂಬ ಸದಸ್ಯನಲ್ಲ. ಹೀಗಾಗಿ ನನಗೆ ದೊರೆತ ಸಚಿವ ಸ್ಥಾನ ನನ್ನ ಅರ್ಹತೆಗೆ ದೊರೆತಿರುವ ಹಕ್ಕು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದ್ದಾರೆ.

ದೇವೇಗೌಡರ ಕುಟುಂಬದವನು ಎಂಬ ಕಾರಣಕ್ಕೆ ಸಚಿವ ಸ್ಥಾನ ದೊರೆತಿದೆ ಎನ್ನುವುದು ತಪ್ಪು. ಅವರ ಕುಟುಂಬವೇ ಬೇರೆ. ನಮ್ಮ ಕುಟುಂಬವೇ ಬೇರೆ. ಸಚಿವ ಸ್ಥಾನ ನನ್ನ ಯೋಗ್ಯತೆ ಹಾಗೂ ಅರ್ಹತೆಗಾಗಿ ದೊರೆತಿದೆ. ನಾನು ಇದಕ್ಕೂ ಮೊದಲು 1999ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದೆ, ಬಿಜೆಪಿಯಲ್ಲಿಯೂ ಇದ್ದೆ, ಹೀಗಾಗಿ ಅನಗತ್ಯ ದೂಷಣೆ ತಪ್ಪು ಎಂದರು.

ಜೆಡಿಎಸ್‌ ಪಕ್ಷದಲ್ಲಿರುವವರೆಲ್ಲರೂ ಒಂದು ಕುಟುಂಬದಂತೆ ಇದ್ದೇವೆ. ಮಂಡ್ಯ ಜಿಲ್ಲೆಯ ಜೆಡಿಎಸ್‌ನಲ್ಲಿ ಯಾವುದೇ ವಿವಾದ ಇಲ್ಲ. ಪುಟ್ಟರಾಜು ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾಯಕತ್ವದ ಬಗ್ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಿರ್ಧಾರ ಮಾಡುತ್ತಾರೆ ಎಂದಷ್ಟೇ ಹೇಳಿದರು.

Follow Us:
Download App:
  • android
  • ios