ಈಶ್ವರಪ್ಪರಿಗೆ ಈ ಬಾರಿ ಟಿಕೆಟ್ ಸಿಗಲ್ವಾ ? ಇಬ್ಬರನ್ನು ಬಿಟ್ಟು ಮೂರನೆಯವರಿಗೆ ಟಿಕೆಟ್ !

No Election Ticket For KSE
Highlights

ವಾಸ್ತವವಾಗಿ ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಗುದ್ದಾಟ. ತಮಗೆ ಟಿಕೆಟ್ ತಪ್ಪಿಸಿ ಪರಮಾಪ್ತ ರುದ್ರೇಗೌಡರಿಗೆ ಟಿಕೆಟ್ ಕೊಡಿಸಬೇಕು ಎಂಬುದು ಯಡಿಯೂರಪ್ಪ ಅವರ ಉದ್ದೇಶ ಎಂಬ ಆರೋಪ ಈಶ್ವರಪ್ಪ ಅವರದ್ದು.

ಬೆಂಗಳೂರು(ಫೆ.16): ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಮುಂದುವರೆದಿರುವ ಮುಖಂಡರ ನಡುವಿನ ತಿಕ್ಕಾಟಕ್ಕೆ ಬೇಸತ್ತಿರುವ ಪಕ್ಷದ ವರಿಷ್ಠರು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಅವರಿಬ್ಬರನ್ನೂ ಹೊರತುಪಡಿಸಿ ಮೂರನೆಯ ವ್ಯಕ್ತಿಗೆ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಬೂದಿ ಮುಚ್ಚಿದಂತಿದ್ದ ಜಿಲ್ಲೆಯ ಬಣ ರಾಜಕೀಯ ಮತ್ತೆ ಸ್ಫೋಟಗೊಂಡಿರುವುದರಿಂದ ಬೇಸತ್ತಿರುವ ಪಕ್ಷದ ವರಿಷ್ಠರು ಉಭಯ ಮುಖಂಡರ ಮನವೊಲಿಸಿ ಅವರಿಗೆ ಒಪ್ಪಿಗೆ ಯಾಗುವಂಥ ಬೇರೊಬ್ಬ ವ್ಯಕ್ತಿಯನ್ನು ಕಣಕ್ಕಿಳಿಸುವ ಕುರಿತು ಗಂಭೀರವಾಗಿ ಪರಿ ಶೀಲನೆ ಆರಂಭಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ವಾಸ್ತವವಾಗಿ ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಗುದ್ದಾಟ. ತಮಗೆ ಟಿಕೆಟ್ ತಪ್ಪಿಸಿ ಪರಮಾಪ್ತ ರುದ್ರೇಗೌಡರಿಗೆ ಟಿಕೆಟ್ ಕೊಡಿಸಬೇಕು ಎಂಬುದು ಯಡಿಯೂರಪ್ಪ ಅವರ ಉದ್ದೇಶ ಎಂಬ ಆರೋಪ ಈಶ್ವರಪ್ಪ ಅವರದ್ದು. ಗೆಲ್ಲುವ ಮಾನದಂಡದ ಆಧಾರದ ಮೇಲೆ ಟಿಕೆಟ್ ನಿರ್ಧರಿಸಲಾಗುವುದು ಎಂಬುದು ಯಡಿಯೂರಪ್ಪ ಅವರ ವಾದ. ಇದು ಕಳೆದ ಒಂದು ವರ್ಷದಿಂದಲೂ ನಡೆದುಕೊಂಡು ಬಂದಿದೆ. ತಮ್ಮ ಅಭಿಪ್ರಾಯ ಕೇಳದೆ ರುದ್ರೇಗೌಡರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದನ್ನೇ ಮುಂದಿಟ್ಟುಕೊಂಡು ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಹೋರಾಟ ನಡೆಸಿದರು. ಆ ಹೋರಾಟದ ಮೂಲ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಆಗಿತ್ತು ಎನ್ನುವುದು ಇದೀಗ ಜಗಜ್ಜಾಹೀರು. ಇದು ಅಂತಿಮವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಳಿ ಹೋದಾಗ ಈಶ್ವರಪ್ಪ ಅವರಿಗೆ ಟಿಕೆಟ್ ನೀಡುವ ಕುರಿತಂತೆ ನಾನಿದ್ದೇನೆ ಹೋಗಿ ಎಂದು ಹೇಳಿ ಸಮಾಧಾನಪಡಿಸಿದ್ದರು. ಭಿನ್ನಮತ ಮೇಲ್ನೋಟಕ್ಕೆ ಕಡಮೆಯಾದಂತೆ ಕಂಡು ಬಂದರೂ ಅದು ಹೊಗೆಯಾಡುತ್ತಲೇ ಇತ್ತು. ಇದೀಗ ಮತ್ತೊಮ್ಮೆ ಕಿಡಿ ಕಾಣಿಸಿಕೊಂಡಿದೆ.

ಇದೆಲ್ಲದರ ನಡುವೆ ಉಭಯ ಮುಖಂಡರ ಪೈಕಿ ಯಾರಿಗೆ ಟಿಕೆಟ್ ನೀಡಿದರೂ ಒಬ್ಬರು ಮತ್ತೊಬ್ಬರನ್ನು ಸೋಲಿಸಲು ತೆರೆಮರೆಯಲ್ಲಿ ಪ್ರಯತ್ನಿಸಬಹುದು ಎಂಬ ಆತಂಕವೂ ಪಕ್ಷದ ವರಿಷ್ಠರಲ್ಲಿದೆ. ಅದರ ಬದಲು ಇಬ್ಬರಿಗೂ ಸಮ್ಮತವಾಗುವಂಥ ವ್ಯಕ್ತಿಯನ್ನು ಕಣಕ್ಕಿಳಿಸಿ ಆ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ವಹಿಸುವುದು ಸೂಕ್ತ ಎಂಬ ದಿಕ್ಕಿನಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಈಶ್ವರಪ್ಪ ಅವರು ಈಗ ಹೇಗಿದ್ದರೂ ವಿಧಾನಪರಿಷತ್ ಸದಸ್ಯರಾಗಿದ್ದಾರೆ.

 ಅವರಿಗೆ ಮುಂದೆ ಬಿಜೆಪಿ ಸರ್ಕಾರ ರಚನೆಯಾದಲ್ಲಿ ಮಂತ್ರಿಯನ್ನಾಗಿಸುವ ಭರವಸೆ ನೀಡಲಾಗುವುದು. ಅದಕ್ಕೆ ಒಪ್ಪದೆ ಈಗ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಪಟ್ಟು ಮುಂದುವರೆಸಿದಲ್ಲಿ ಮಂತ್ರಿಯಾಗುವುದು ಮುಖ್ಯವೋ ಅಥವಾ ವಿಧಾನಸಭೆ ಪ್ರವೇಶಿಸುವುದೋ ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟು ಒಪ್ಪಿಸುವ ಚಿಂತನೆಯೂ ಇದೆ. ಅದೇ ರೀತಿ ರುದ್ರೇಗೌಡರನ್ನೂ ಸರ್ಕಾರ ರಚನೆಯಾದಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ನೀಡುವ ಆಶ್ವಾಸನೆ ನೀಡುವ ಮೂಲಕ ಅಸಮಾಧಾನ ಶಮನಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

loader