ಬೆಂಗಳೂರು (ಜೂ. 28):  ರಾಜಧಾನಿಯಲ್ಲಿ ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಮೂಲ ಸೌಕರ್ಯದ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಗಳವರೆಗೆ ಅಪಾರ್ಟ್‌ಮೆಂಟ್‌ ನಿರ್ಮಾಣ ನಿಷೇಧಿಸುವ ಚಿಂತನೆ ಹೊಂದಿರುವುದಾಗಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ಗುರುವಾರ ಸದಾಶಿವನಗರದ ಬಿಡಿಎ ಕ್ವಾರ್ಟರ್ಸ್‌ನ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸಾಕಷ್ಟುಅಪಾರ್ಟ್‌ಮೆಂಟ್‌ಗಳನ್ನು ಕಟ್ಟಲಾಗಿದೆ. ಆದರೆ, ಮಾರಾಟ ಮಾಡುವ ವೇಳೆ ಕುಡಿಯುವ ನೀರಿನಂಥ ಮೂಲಸೌಕರ್ಯ ಒದಗಿಸಿಕೊಡುವ ಭರವಸೆ ನೀಡುವುದಿಲ್ಲ.

ನೀರಿನ ಅಭಾವದಿಂದ ಬಹುತೇಕರು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿಕೊಂಡು, ಚರ್ಮರೋಗದಂಥ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಐದು ವರ್ಷಗಳ ಕಾಲ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ನಿಷೇಧ ವಿಧಿಸುವ ಚಿಂತನೆಯಿದೆ. ಆದರೆ, ಈ ನಿರ್ಧಾರವನ್ನು ಏಕಾಏಕಿ ಜಾರಿಗೊಳಿಸುವುದಿಲ್ಲ. ಈ ಸಂಬಂಧ ಎಲ್ಲ ಡೆವಲಪರ್ಸ್ ಸಂಸ್ಥೆಗಳ ಸಭೆ ನಡೆಸಿ ಅಭಿಪ್ರಾಯ ಪಡೆದು ಅನಂತರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರಿಗೆ ವಿವಿಧ ಮೂಲಗಳಿಂದ ನೀರು ತರುವ ಪ್ರಯತ್ನ ನಡೆಯುತ್ತಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ಅಲ್ಲಿಂದ 10 ಟಿಎಂಸಿ ನೀರು ತರಲು ಸಾಧ್ಯವಿದೆ. ಕಾವೇರಿ 5ನೇ ಹಂತದ ಯೋಜನೆಯನ್ನು ಜೈಕಾ ಸಂಸ್ಥೆಯ ಹಣಕಾಸು ನೆರವಿನಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಿದರೆ ನಗರಕ್ಕೆ ಹೆಚ್ಚುವರಿಯಾಗಿ 700 ಎಂಎಲ್‌ಡಿ ನೀರು ಲಭ್ಯವಾಗಲಿದೆ. ಆದರೂ ನೀರಿನ ಕೊರತೆ ಉಂಟಾಗಲಿದೆ. ಹೀಗಾಗಿಯೇ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದ ಮೇಲೆ ನಿಯಂತ್ರಣ ವಿಧಿಸುವ ಚಿಂತನೆ ಮೂಡಿದೆ ಎಂದರು.

ಈಗಾಗಲೇ ಸಾಕಷ್ಟುಅಪಾರ್ಟ್‌ಮೆಂಟ್‌ಗಳು ನಿರ್ಮಾಣಗೊಂಡಿವೆ. ಅವುಗಳಲ್ಲಿ ಮಾರಾಟವಾಗದೆ ಸಾಕಷ್ಟುಫ್ಲಾಟ್‌ಗಳು ಖಾಲಿ ಇವೆ. ಒಂದೆಡೆ ಮೂರು ಸಾವಿರ ಫ್ಲಾಟ್‌ಗಳು ನಿರ್ಮಾಣವಾದರೆ ಅಲ್ಲಿ ಮೂರು ಸಾವಿರ ವಾಹನಗಳು ಸಂಚರಿಸುತ್ತವೆ. ಅಷ್ಟುವಾಹನಗಳಿಗೆ ಸಾಕಾಗುವಷ್ಟುರಸ್ತೆ ನಿರ್ಮಾಣವಾಗಿದೆಯೇ? ಅಲ್ಲಿ ವಾಸ ಮಾಡುವ ಎಲ್ಲರಿಗೂ ಕುಡಿಯುವ ನೀರು ಒದಗಿಸುವ ಸಾಮರ್ಥ್ಯ ಇದೆಯೇ? ಎಂಬಿತ್ಯಾದಿ ಅಂಶಗಳನ್ನು ಪರಿಗಣಿಸಬೇಕಿದೆ. ಈ ಎಲ್ಲ ವ್ಯವಸ್ಥೆಗಳನ್ನು ಮಾಡಲು ಐದಾರು ವರ್ಷಗಳ ಕಾಲಾವಕಾಶ ಬೇಕಿದೆ. ಹೀಗಾಗಿ ಅಲ್ಲಿಯವರೆಗೂ ಹೊಸ ಅಪಾರ್ಟ್‌ಮೆಂಟ್‌ಗಳಿಗೆ ಅನುಮತಿ ನೀಡದಿರಲು ಚಿಂತನೆ ನಡೆಸಿದ್ದೇವೆ ಎಂದರು.

ಜನವಸತಿ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೂ ತಡೆಯೊಡ್ಡುವ ಚಿಂತನೆ ಇದೆ. ಈಗಾಗಲೇ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸೇರಿದಂತೆ ನಿಯಮಾನುಸಾರ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಬಿಬಿಎಂಪಿ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಬೆಂಗಳೂರಿಗೆ ಇರುವ ನೀರಿನ ಬೇಡಿಕೆ ನೀಗಿಸುವ ಉದ್ದೇಶದಿಂದ ಶರಾವತಿ, ಲಿಂಗನಮಕ್ಕಿಯಿಂದ ನೀರು ತರಲು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಸೂಚನೆ ನೀಡಿದ್ದೆ. ಆದರೆ, ಈ ಯೋಜನೆಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ವಿರೋಧ ಮಾಡುತ್ತಿವೆ. ಇರಲಿ, ಈ ಬಗ್ಗೆ ನಾನು ಈಗ ಏನೂ ಮಾತನಾಡುವುದಿಲ್ಲ ಎಂದು ಪರಮೇಶ್ವರ್‌ ಹೇಳಿದರು.