ವೀರಶೈವ ಮತ್ತು ಲಿಂಗಾಯತ ಧರ್ಮ ವಿವಾದ ಸದ್ಯಕ್ಕೆ ಒಂದು ತಾರ್ಕಿಕ ಅಂತ್ಯ ಮುಟ್ಟುವುದು ಅನುಮಾನವಾಗಿದೆ. ಧರ್ಮ ಬೇಡಿಕೆ ಪರಿಶೀಲನೆ ಸಂಬಂಧ ರಾಜ್ಯ ಅಲ್ಪಸಂಖ್ಯಾತ ಆಯೋಗ ರಚಿಸಿರುವ ತಜ್ಞರ ಸಮಿತಿಯು ಸಮಗ್ರ ಅಧ್ಯಯನಕ್ಕಾಗಿ ಆರು ತಿಂಗಳ ಕಾಲಾವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಿದೆ. ಹೀಗಾಗಿ ಸದ್ಯದ ಮಟ್ಟಿಗೆ ಈ ವಿವಾದ ಬಗೆಹರಿಯುವುದು ಅನುಮಾನವಾಗಿದೆ.
ಬೆಂಗಳೂರು (ಜ.07): ವೀರಶೈವ ಮತ್ತು ಲಿಂಗಾಯತ ಧರ್ಮ ವಿವಾದ ಸದ್ಯಕ್ಕೆ ಒಂದು ತಾರ್ಕಿಕ ಅಂತ್ಯ ಮುಟ್ಟುವುದು ಅನುಮಾನವಾಗಿದೆ. ಧರ್ಮ ಬೇಡಿಕೆ ಪರಿಶೀಲನೆ ಸಂಬಂಧ ರಾಜ್ಯ ಅಲ್ಪಸಂಖ್ಯಾತ ಆಯೋಗ ರಚಿಸಿರುವ ತಜ್ಞರ ಸಮಿತಿಯು ಸಮಗ್ರ ಅಧ್ಯಯನಕ್ಕಾಗಿ ಆರು ತಿಂಗಳ ಕಾಲಾವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಿದೆ. ಹೀಗಾಗಿ ಸದ್ಯದ ಮಟ್ಟಿಗೆ ಈ ವಿವಾದ ಬಗೆಹರಿಯುವುದು ಅನುಮಾನವಾಗಿದೆ.
ಒಂದು ವೇಳೆ ಸರ್ಕಾರವು 6 ತಿಂಗಳು ಕಾಲಾವಕಾಶ ನೀಡಿದ್ದೇ ಆದಲ್ಲಿ, ಸಿದ್ದರಾಮಯ್ಯ ಸರ್ಕಾರದ ಅವಧಿ ಮುಗಿಯುವುದರೊಳಗೆ (ಮೇ ಒಳಗೆ) ವಿವಾದ ಇತ್ಯರ್ಥಗೊಳ್ಳುವುದು ಸಂದೇಹಾಸ್ಪದ. ಹೀಗಾಗಿ ಮುಂದಿನ ಸರ್ಕಾರದ ಅವಧಿಯಲ್ಲೇ ಈ ವಿಷಯ ತೀರ್ಮಾನಗೊಳ್ಳುವ ಸಂಭವವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಶನಿವಾರ ವಿಕಾಸಸೌಧದಲ್ಲಿ ನಡೆದ ತಜ್ಞರ ಸಮಿತಿಯ ಮೊದಲ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೇ ವೇಳೆ, ತಜ್ಞರ ಸಮಿತಿಗೆ ಮಹಿಳಾ ಸದಸ್ಯರೊಬ್ಬರನ್ನು ನೇಮಕ ಮಾಡುವಂತೆ ಕೋರಲು ಮುಂದಾಗಿದೆ.
ಅವಧಿ ವಿಸ್ತರಿಸಿ: ಈ ಮೊದಲು ವೀರಶೈವ ಲಿಂಗಾಯತ ಧರ್ಮ ರಚನೆ ವಿವಾದದ ಸಂಬಂಧ ರಾಜ್ಯ ಸರ್ಕಾರ ಶಿಫಾರಸು ನೀಡುವಂತೆ ಆಯೋಗವನ್ನು ಕೋರಿತ್ತು. ಹೀಗಾಗಿ ಆಯೋಗ ತಜ್ಞರ ಸಮಿತಿ ರಚಿಸಿದ್ದು, ಈ ಸಮಿತಿಗೆ ವರದಿ ನೀಡಲು ಒಂದು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ ನಾಲ್ಕು ವಾರಗಳ ಅವಧಿ ಸಾಕಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಸಮಿತಿ ಆರು ತಿಂಗಳ ಅವಧಿ ಕೋರಿ ಆಯೋಗಕ್ಕೆ ಮನವಿ ಮಾಡಲಿದೆ. ಸಮಿತಿಯ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ತಜ್ಞರ ಸಮಿತಿ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿಎಚ್.ಎನ್.ನಾಗಮೋಹನ್ ದಾಸ್, ತಜ್ಞರ ಸಮಿತಿಯಲ್ಲಿ ಏಳು ಜನ ಸದಸ್ಯರಿದ್ದು, ಒಬ್ಬ ಮಹಿಳಾ ಸದಸ್ಯೆ ಇರುವುದು ಅಗತ್ಯವೆಂಬ ಭಾವಿಸಿ, ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ ಎಂದರು.
ಮಾಹಿತಿ, ದಾಖಲೆಗಳಿಗೆ ಆಹ್ವಾನ: ಇದರ ಜತೆಗೆ ವೀರಶೈವ ಮತ್ತು ಲಿಂಗಾಯತ ಧರ್ಮ ರಚನೆ ಮತ್ತು ಈ ಸಮುದಾಯಗಳಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವ ಕುರಿತು ಪರ ಮತ್ತು ವಿರೋಧ ಮನವಿಗಳು ಸರ್ಕಾರಕ್ಕೆ ಬಂದಿದ್ದವು. ಅವುಗಳನ್ನು ಸರ್ಕಾರ ಆಯೋಗಕ್ಕೆ ರವಾನಿಸಿತ್ತು. ಅದೇ ಅರ್ಜಿಗಳು ಈ ಸಮಿತಿ ಮುಂದೆ ಬಂದಿವೆ. ಒಟ್ಟು ೩೬ ವ್ಯಕ್ತಿ ಮತ್ತು ಸಂಘಟನೆಗಳು ಮನವಿ ನೀಡಿದೆ. ಇದರ ಜತೆಗೆ ತಜ್ಞರ ಸಮಿತಿ ಸಾರ್ವಜನಿಕರಿಂದ ಮಾಹಿತಿ ಹಾಗೂ ದಾಖಲೆಗಳನ್ನು ಆಹ್ವಾನಿಸಲು ತೀರ್ಮಾನಿಸಿದೆ. ಜ.8ರಿಂದ ಜ.25ರವರೆಗೆ ಆಸಕ್ತರು ತಜ್ಞರ ಸಮಿತಿ ಎದುರು ಮಾಹಿತಿ ನೀಡಬಹುದಾಗಿದೆ. ಜ.೨೭ರಂದು ಸಮಿತಿಯ ಮತ್ತೊಂದು ಸಭೆ ನಡೆಯಲಿದೆ. ಆಗ ಅರ್ಜಿ ಸಲ್ಲಿಸಿದವರಿಂದ ಮೌಖಿಕ ಹೇಳಿಕೆ ಪಡೆಯುವ ದಿನಾಂಕ ನಿಗದಿ ಮಾಡಲಾಗುವುದು ಎಂದರು. ಇಷ್ಟೆಲ್ಲ ಪ್ರಕ್ರಿಯೆ ನಡೆಯಬೇಕಾದರೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಆಯೋಗ ನೀಡಿರುವ ನಾಲ್ಕು ವಾರಗಳ ಅವಧಿ ಸಾಲದು. ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲು ಸಮಿತಿ ಸಭೆ ತೀರ್ಮಾನಿಸಿದೆ.
ವರದಿ ವೈಜ್ಞಾನಿಕ ಹಾಗೂ ಕಾನೂನಾತ್ಮಕ ಆಗಬೇಕಾದರೆ ಸಮಯ ಬೇಕಾಗುತ್ತದೆ. ಈಗಾಗಲೇ ಸಲ್ಲಿಕೆಯಾಗಿರುವ 36 ಅರ್ಜಿಗಳ ಜತೆಗೆ ಸಮಿತಿ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿ, ಮಾಹಿತಿ ಹಾಗೂ ದಾಖಲೆಗಳು ಬರುವ ನಿರೀಕ್ಷೆ ಇದೆ. ಹೀಗಾಗಿ ಅವೆಲ್ಲವುಗಳ ಸಮಗ್ರ ಅಧ್ಯಯನಕ್ಕೆ ಆರು ತಿಂಗಳು ಬೇಕಾಗುತ್ತದೆ ಎಂದು ಹೇಳಿದ ಅವರು, ಈ ವಿಚಾರದಲ್ಲಿ ಯಾವುದೇ ಮಧ್ಯಂತರ ವರದಿ ನೀಡುವ ಇಚ್ಛೆ ಸಮಿತಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.
