Asianet Suvarna News Asianet Suvarna News

ಸಂಪುಟ ವಿಸ್ತರಣೆ ಇನ್ನು ಒಂದು ತಿಂಗಳು ಇಲ್ಲ

  • ಜು.14ರಿಂದ ಆಷಾಢ ಆರಂಭವಾಗಲಿದೆ. ಆಷಾಢದಲ್ಲಿ ಒಳ್ಳೆಯ ಕೆಲಸ ಮಾಡಬಾರದು ಎಂಬ ನಂಬಿಕೆಯಿದೆ
  • ಈಗ ಮತ್ತೆ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಅದು ಮತ್ತಷ್ಟು ಗೊಂದಲಗಳಿಗೆ ಕಾರಣವಾಗಬಹುದು 
No Coalition cabinet expansion for now

ಬೆಂಗಳೂರು[ಜು.10]: ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹಾಕಲು ಕಾಂಗ್ರೆಸ್ ನಾಯಕರಿಗೆ ಈಗ ಆಷಾಢದ ನೆಪ ದೊರಕಿದೆ. ಎಐಸಿಸಿ ಮಟ್ಟದಲ್ಲಿ ಹಠಾತ್ ನಿರ್ಧಾರಗಳು ಆಗದಿದ್ದರೆ ಆಷಾಢ ಮುಗಿಯುವವರೆಗೂ ಸಚಿವ ಸಂಪುಟ ವಿಸ್ತರಣೆ ನಡೆಯುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ವಿಧಾನಮಂಡಲ ಅಧಿವೇಶನದ ನೆಪದಲ್ಲಿ ಸಂಪುಟ ವಿಸ್ತರಣೆಯನ್ನು ಮುಂದಕ್ಕೆ ಹಾಕಿದ್ದ ಕಾಂಗ್ರೆಸ್ ನಾಯಕತ್ವ ಇದೀಗ ಆಷಾಢದ ನೆಪವನ್ನು ಆಕಾಂಕ್ಷಿಗಳ ಮುಂದಿಡಲು ಸಜ್ಜಾಗಿದೆ. ಏಕೆಂದರೆ, ನಿಗದಿತ ವೇಳಾಪಟ್ಟಿ ಪ್ರಕಾರ ವಿಧಾನಮಂಡಲ ಅಧಿವೇಶನ ಜು.12ಕ್ಕೆ ಕೊನೆಗೊಳ್ಳಲಿದೆ. ಜು.14ರಿಂದ ಆಷಾಢ ಆರಂಭವಾಗಲಿದೆ. ಆಷಾಢದಲ್ಲಿ ಒಳ್ಳೆಯ ಕೆಲಸ ಮಾಡಬಾರದು ಎಂಬ  ಬಿಕೆಯಿದೆ. ಈ ನಂಬಿಕೆಯನ್ನು ಮೀರಿ ಸಂಪುಟ ವಿಸ್ತರಣೆಗೆ ಮಿತ್ರ ಪಕ್ಷ ಜೆಡಿಎಸ್ ಅವಕಾಶ ನೀಡುವುದು ಕಷ್ಟ. ಹೀಗಾಗಿ ಸಂಪುಟ ವಿಸ್ತರಣೆ ನಡೆಯಬೇಕಿದ್ದರೆ, ಜು.12ರ ಸಂಜೆ ಹಾಗೂ ಜು.13 ಮಾತ್ರ ಅವಕಾಶವಿದೆ.

ಆದರೆ, ಪಕ್ಷದ ಪಾಲಿನಲ್ಲಿ ಖಾಲಿಯಿರುವ ಆರು ಸ್ಥಾನಗಳ ಪೈಕಿ ಎಷ್ಟನ್ನು ಮತ್ತು ಯಾರ್ಯಾರನ್ನು ತುಂಬಿಕೊಳ್ಳಬೇಕು ಎಂದು ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಇದು ಆಗಬೇಕಾದರೆ ರಾಜ್ಯ ನಾಯಕರು ಪಟ್ಟಿ ಸಿದ್ದಪಡಿಸಿ ಒಂದು ಬಾರಿಯಾದರೂ ದೆಹಲಿ ಭೇಟಿ ಮಾಡಬೇಕು. ಇದಕ್ಕೆ ಸಮಯಾವಕಾಶವಿಲ್ಲ. ಹೀಗಾಗಿ, ಎಐಸಿಸಿ ಮಟ್ಟದಲ್ಲಿ ಭಾರಿ ಪ್ರಭಾವ ಬೀರಿ ಸಂಪುಟ ವಿಸ್ತರಣೆಯಾಗುವಂತೆ ಆಕಾಂಕ್ಷಿಗಳು ನೋಡಿಕೊಳ್ಳಬೇಕು! ಮೂಲಗಳ ಪ್ರಕಾರ ಅಂತಹ ಸಾಧ್ಯತೆ ಕಡಿಮೆ.

ಅಲ್ಲದೆ, ಮೊದಲ ಸಂಪುಟ ರಚನೆಯಿಂದ ಉಂಟಾದ ಬಂಡಾಯ ಹಾಗೂ ಆಕ್ರೋಶ ಇತ್ತೀಚೆಗೆ ತಹಬದಿಗೆ ಬಂದಿದ್ದು, ಸರ್ಕಾರ ಈಗಷ್ಟೇ ಸಹಜ ಸ್ಥಿತಿಗೆ ಬಂದಿದೆ. ಈಗ ಮತ್ತೆ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಅದು ಮತ್ತಷ್ಟು ಗೊಂದಲಗಳಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಜೆಡಿಎಸ್ ಸಹ ಈಗಲೇ ಸಂಪುಟ ವಿಸ್ತರಣೆ ಬೇಡ ಎಂಬ ಸಲಹೆ ನೀಡಿದೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಕನಿಷ್ಠ ಆಷಾಢ ಮುಗಿಯುವವರೆಗೂ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವ ಸಾಧ್ಯತೆಯಿದೆ ಎನ್ನುತ್ತವೆ ಮೂಲಗಳು. ಆದರೆ, ನಿಗಮ ಮಂಡಳಿ ನೇಮಕಕ್ಕೆ ಆಷಾಢ ಅಡ್ಡಿಯಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

Follow Us:
Download App:
  • android
  • ios