ನವದೆಹಲಿ(ಸೆ.29): ಸರ್ಕಾರದ ಒಪ್ಪಿಗೆಗೆ ಕಾಯುತ್ತಿದ್ದ 25 ಮಂದಿ ಸೇನಾ ಕಮಾಂಡೋಗಳು ಅತ್ಯಂತ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿ ಪಿಒಕೆಯಲ್ಲಿದ್ದ ಉಗ್ರರ 6 ಶಿಬಿರಗಳನ್ನು ನುಚ್ಚುನೂರು ಮಾಡಿ ಬಂದಿದ್ದಾರೆ. ಉಗ್ರರ ವಿರುದ್ಧ ನಡೆದ ಈ ಕಾರ್ಯಾಚರಣೆಯ ಮಾಹಿತಿ ಇಲ್ಲಿದೆ.
3 ಕಿ.ಮೀ. ತೆವಳಿಕೊಂಡೇ ಹೋದರು:
ಅದು ಬುಧವಾರ ಮಧ್ಯರಾತ್ರಿ. ಸರ್ಜಿಕಲ್ ದಾಳಿಗೆ ಸರ್ಕಾರದ ಒಪ್ಪಿಗೆ ಸಿಕ್ಕಿದ್ದೇ ತಡ ನಮ್ಮ ಕಮಾಂಡೋಗಳು ಸನ್ನದ್ಧರಾದರು. ಕಲ್ಲು-ಮಣ್ಣು, ನೆಲಬಾಂಬ್‌ಗಳನ್ನೂ ಲೆಕ್ಕಿಸದೇ ಸುಮಾರು 3 ಕಿ.ಮೀ. ಉದ್ದಕ್ಕೂ ಯೋಧರು ತೆವಳುತ್ತಾ ಸಾಗಿದರು. ಪಾಕ್ ಸೇನೆಯ ಕಣ್ಣಿಗೆ ಬಿದ್ದರೆ ಎಂಬ ಭೀತಿಯ ನಡುವೆಯೂ, ಭಾರಿ ಸಂಖ್ಯೆಯ ಉಗ್ರರಿದ್ದ ಶಿಬಿರಗಳನ್ನು ಗುರಿಯಾಗಿಸಿಕೊಂಡು ಮುಂದೆ ಚಲಿಸಲಾರಂಭಿಸಿದರು.
ಏನಾಗುತ್ತಿದೆಯೆಂದೇ ತಿಳಿಯಲಿಲ್ಲ:
ಯೋಧರಲ್ಲಿ ಟೆವೋರ್, ಎಂ-4 ಗನ್‌ಗಳು, ಗ್ರೆನೇಡ್‌ಗಳು ಹಾಗೂ ಸ್ಮೋಕ್ ಗ್ರೆನೇಡ್‌ಗಳಿದ್ದವು. ಜತೆಗೆ, ರಾತ್ರಿ ಹೊತ್ತು ಕಣ್ಣು ಸರಿಯಾಗಿ ಕಾಣಿಸುವ ಸಾಧನಗಳು, ಕ್ಯಾಮೆರಾವುಳ್ಳ ಹೆಲ್ಮೆಟ್‌ಗಳನ್ನೂ ಧರಿಸಿದ್ದರು. ನಿಗದಿತ ಪ್ರದೇಶ ತಲುಪುತ್ತಿದ್ದಂತೆಯೇ, ಉಗ್ರರಿಗೇ ಅಚ್ಚರಿಯಾಗುವಂತೆ ಏಕಾಏಕಿ ದಾಳಿ ನಡೆಸಲಾಯಿತು. ಉಗ್ರರ ಶಿಬಿರಗಳ ಮೇಲೆ ಸ್ಮೋಕ್ ಗ್ರೆನೇಡ್‌ಗಳ ಮಳೆಗೆರೆಯಲಾಯಿತು. ಯೋಧರ ಕಾರ್ಯಾಚರಣೆಯು ಎಷ್ಟು ಕ್ಷಿಪ್ರ ಹಾಗೂ ನಿರ್ದಿಷ್ಟವಾಗಿತ್ತೆಂದರೆ, ಉಗ್ರರು ಹಾಗೂ ಪಾಕ್ ಸೇನೆ ಅಲ್ಲಿ ಏನಾಗುತ್ತಿದೆ ಎಂಬುದನ್ನು ಅರಿಯುವಷ್ಟರಲ್ಲಿ 38 ಉಗ್ರರು ಸತ್ತುಬಿದ್ದಿದ್ದರು.
ರಿಯಲ್ ಟೈಂ ಮೇಲ್ವಿಚಾರಣೆ:
ಉಗ್ರ ಒಸಾಮನನ್ನು ಹೊಡೆದುರುಳಿಸುವಾಗ ಅಮೆರಿಕದ ಸ್ಥಿತಿ ಹೇಗಿತ್ತೋ, ಅದೇ ಸ್ಥಿತಿ ದೆಹಲಿಯಲ್ಲೂ ಇತ್ತು. ಅತ್ತ ಪಿಒಕೆಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದರೆ, ಇತ್ತ ದೆಹಲಿಯಲ್ಲಿ ರಕ್ಷಣಾ ಸಚಿವ ಮನೋಹರ್ ಪರ‌್ರಿಕರ್, ಎನ್‌ಎಸ್‌ಎ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಜ.ದಲ್ಬೀರ್ ಸಿಂಗ್ ಸುಹಾಗ್ ಅವರು ಸಂಪೂರ್ಣವಾಗಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದರು. ಪ್ರಧಾನಿ ಮೋದಿಯವರಿಗೂ ನಿರಂತರ ಸಂದೇಶ ರವಾನಿಸಲಾಗುತ್ತಿತ್ತು.
ರಾತ್ರಿಯ ಊಟ ಬಿಟ್ಟರು:
ಬುಧವಾರ ರಾತ್ರಿ ದೆಹಲಿಯಲ್ಲಿ ಕೋಸ್ಟ್‌ಗಾರ್ಡ್ ಕಮಾಂಡರ್ ಸಮಾವೇಶದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಇದಕ್ಕೆ ಪರಿಕರ್, ದೋವಲ್, ಜ.ಸುಹಾರ್ ಕೂಡ ಬರುವವರಿದ್ದರು. ಆದರೆ, ದಾಳಿಯ ನಿರ್ಧಾರವಾದ ಹಿನ್ನೆಲೆಯಲ್ಲಿ ಮೂವರೂ ಔತಣಕೂಟವನ್ನು ತ್ಯಜಿಸಿ, ನೇರವಾಗಿ ಸೇನಾ ಪ್ರಧಾನ ಕಚೇರಿಗೆ ಬಂದರು. ಇಲ್ಲಿ ಅಂತಿಮ ನಿರ್ಧಾರ ಕೈಗೊಂಡ ಬಳಿಕವೇ ಕಾರ್ಯಾಚರಣೆಗೆ ಹಸಿರು ನಿಶಾನೆ ನೀಡಿದರು.
ಉಗ್ರರ ಲಾಂಚ್ ಪ್ಯಾಡ್ ಎಂದರೇನು?
ರಕ್ಷಣಾ ಸಚಿವ ಮನೋಹರ್ ಪರಿಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಇದೇ ವೇಳೆ, ದಾಳಿಯಿಂದ ಮೃತಪಟ್ಟವರೆಷ್ಟು ಎಂಬ ಬಗ್ಗೆ ಗುರುವಾರ ಇಡೀ ದಿನ ಮಾಧ್ಯಮಗಳಲ್ಲಿ ಗೊಂದಲಮಯ ಮಾಹಿತಿ ಬರುತ್ತಿತ್ತು. ಸರ್ಕಾರವಾಗಲೀ, ಸೇನೆಯಾಗಲೀ ಅಕೃತವಾಗಿ ಈ ಕುರಿತ ಯಾವುದೇ ವಿವರ ನೀಡಿಲ್ಲ. ಆದರೆ, ವಿದ್ಯುನ್ಮಾನ ಮಾಧ್ಯಮಗಳು 38 ರಿಂದ 40 ಮಂದಿ ಉಗ್ರರು ಸಾವಿಗೀಡಾಗಿದ್ದಾರೆ ಎಂದು ವರದಿ ಮಾಡಿವೆ.
