ಕೆ.ಆರ್‌.ಪೇಟೆ[ಸೆ.13]: ರಾಜ್ಯದಲ್ಲಿ ಅನರ್ಹಗೊಂಡ 17 ಶಾಸಕರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುವುದೇ ಅನುಮಾನ. ಕೇಂದ್ರ ಸರ್ಕಾರವು ದೇಶದ ಇತರೆ ರಾಜ್ಯಗಳ ಜೊತೆಗೆ ಕರ್ನಾಟಕದಲ್ಲೂ ವಿಧಾನಸಭೆ ಚುನಾವಣೆ ನಡೆಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಪಟ್ಟಣದಲ್ಲಿ ಗುರುವಾರ ತಾಲೂಕು ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯ ವಿಧಾನಸಭೆ ಹಾಗೂ ದೇಶದ ಇತರೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆದರೆ ಯಾರೂ ಅಚ್ಚರಿಪಡಬೇಕಿಲ್ಲ. ಕೇಂದ್ರದ ಲೆಕ್ಕಾಚಾರವೇ ಬೇರೆ. ಒಂದು ವೇಳೆ ಉಪ ಅಥವಾ ಮಧ್ಯಂತರ ಚುನಾವಣೆ ನಡೆದರೂ ಕಾರ್ಯಕರ್ತರು ಸಿದ್ಧರಾಗಿರಬೇಕು. ಒಂದು ಮಾತಂತು ಸತ್ಯ. ಕೆ.ಆರ್‌.ಪೇಟೆಯಲ್ಲಿ ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ, ಗೆಲ್ಲಿಸಿ ನನ್ನ ಶಕ್ತಿ ಏನೆಂಬುದನ್ನು ತೋರಿಸುತ್ತೇನೆ ಎಂದು ಹೇಳಿದರು.

ನನ್ನಿಂದ ಮಾಜಿ ಸ್ಪೀಕರ್‌ ಕೃಷ್ಣ , ಮಾಜಿ ಶಾಸಕ ಪ್ರಕಾಶ್‌ ಮತ್ತು ಮುಖಂಡ ಬಿ.ಎಲ್‌. ದೇವರಾಜು ಅವರಿಗೆ ಸಾಕಷ್ಟುಅನ್ಯಾಯವಾಗಿದೆ. ಒಂದು ಬಾರಿ ಟಿಕೆಟ್‌ ಕೊಟ್ಟು ಗೆಲ್ಲಿಸಿದ್ದಾಗಿದೆ, ಅಷ್ಟೇ ಸಾಕು ಎಂದು ಎಷ್ಟೇ ಹೇಳಿದರೂ ನನ್ನ ಮಾತು ಕೇಳದೆ ಕುಮಾರಸ್ವಾಮಿ ಮುಂಬೈವಾಲ ನಾರಾಯಣಗೌಡರನ್ನು 2018ರಲ್ಲೂ ಮತ್ತೆ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ ಆಯ್ಕೆ ಮಾಡಿದ್ದಾನೆ. ಆಗ ಗೆಲ್ಲಿಸಿದ ತಪ್ಪಿಗೆ ಈಗ ಪಶ್ಚಾತ್ತಾಪ ಪಡುತ್ತಿದ್ದಾನೆ ಎಂದು ಹೇಳಿದರು.

‘ಈ ದೇವೇಗೌಡ ಕೆ.ಆರ್‌.ಪೇಟೆಗೆ ಮತ್ತೆ ಬರುತ್ತಾನೆ. ನನ್ನ ಶಕ್ತಿ ಏನೆಂಬುದನ್ನು ತೋರಿಸುತ್ತಾನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನನ್ನೇ ಗುರುತಿಸಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಗೆಲ್ಲಿಸಿ ಹೊಸ ಇತಿಹಾಸ ನಿರ್ಮಿಸುತ್ತಾನೆ. ಇದು ನನ್ನ ಶಪಥ ಎಂದು ದೇವೇಗೌಡ ಹೇಳಿದರು.