ಬೆಂಗಳೂರಿನಲ್ಲಿ ಪಾದ್ರಿಯೊಬ್ಬರಿಗೆ ಬಿಜೆಪಿ ಮುಖಂಡರೊಬ್ಬರು ಥಳಿಸಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು?
ಬಿಜೆಪಿ ಮುಖಂಡನೊಬ್ಬ ಬೆಂಗಳೂರಿನ ಚಚ್‌ರ್‍ನಲ್ಲಿ ಪಾದ್ರಿಗೆ ಥಳಿಸಿದ್ದಾನೆ’ ಎನ್ನುವ ಸಂದೇಶವಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಪಾದ್ರಿ ಮತ್ತು ಒಬ್ಬ ನೀಲಿ ಬಣ್ಣದ ಶರ್ಟ್ ಧರಿಸಿರುವ ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಬಳಿಕ ವ್ಯಕ್ತಿಯು ಪಾದ್ರಿ ಮೇಲೆ ಹಲ್ಲೆಗೆ ಮುಂದಾಗಿ ಕೊರಳಪಟ್ಟಿಹಿಡಿದು ಕಪಾಳಕ್ಕೆ ಥಳಿಸುತ್ತಾನೆ. ನಂತರ ಚಚ್‌ರ್‍ನಲ್ಲಿ ನೆರೆದಿದ್ದ ಜನರು ಗುಂಪು ಕಟ್ಟಿಕೊಂಡು ಘಟನೆಯನ್ನು ನಿಯಂತ್ರಣಕ್ಕೆ ತರಲು ಯತ್ನಿಸುತ್ತಾರೆ.
ಆದರೆ ನಿಜಕ್ಕೂ ಬೆಂಗಳೂರಿನ ಚಚ್‌ರ್‍ನಲ್ಲಿ ಇಂತಹ ಘಟನೆ ನಡೆದಿತ್ತೇ, ಥಳಿಸಿರುವ ವ್ಯಕ್ತಿ ಬಿಜೆಪಿ ಮುಖಂಡನೇ ಎಂದು ‘ಬೂಮ್‌ಲೈವ್’ ಪರಿಶೀಲನೆಗೆ ಮುಂದಾದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. ಏಕೆಂದರೆ ವಾಸ್ತವವಾಗಿ ಈ ಘಟನೆ ಕರ್ನಾಟಕದಲ್ಲಿ ನಡೆದಿದ್ದಲ್ಲ, ತೆಲಂಗಾಣದಲ್ಲಿ ನಡೆದಿರುವ ಘಟನೆ ಇದು. 2018ರ ಮೇ 27ರಂದು ತೆಲಂಗಾಣದ ಭದ್ರಾದ್ರಿ ಕೊತ್ತಗೂಡಮ್‌ನಲ್ಲಿರುವ ಚಚ್‌ರ್‍ನ ಪಾದ್ರಿ ಮೇಲೆ ಚರ್ಚಿನ ಸದಸ್ಯನೊಬ್ಬ ಹಲ್ಲೆ ಮಾಡಿದ್ದು, ಇದನ್ನು ‘ಟೀವಿ 9 ತೆಲುಗು’ ವರದಿ ಮಾಡಿತ್ತು. ಬೂಮ್ ಲೈವ್ ಈ ಬಗ್ಗೆ ಚಚ್‌ರ್‍ನ ಸಮಿತಿಯ ಸದಸ್ಯರೊಬ್ಬರಿಂದ ಸ್ಪಷ್ಟೀಕರಣ ಕೂಡ ಪಡೆದಿದ್ದು, ‘ಕಳೆದ ವರ್ಷದವರೆಗೂ ಚಚ್‌ರ್‍ನ ಕಾರ್ಯದರ್ಶಿಯಾಗಿದ್ದ ಆನಂದ್ ರಾವ್ ಕೊಲಾಪುಡಿ ಎಂಬುವವರು ಚಚ್‌ರ್‍ನಲ್ಲಿ ಕೆಲ ಆಂತರಿಕ ಸಮಸ್ಯೆಯನ್ನು ಸೃಷ್ಟಿಸಿದ್ದರಿಂದ ಚಚ್‌ರ್‍ನ ಸದಸ್ಯತ್ವದಿಂದ ತೆಗೆದುಹಾಕಲಾಗಿತ್ತು.
ಆದರೆ ಮೇ 27ರಂದು ಚಚ್‌ರ್‍ಗೆ ಬಂದು ಬಹಿಷ್ಕಾರದ ಬಗ್ಗೆ ಪಾದ್ರಿ ಬಳಿ ಪ್ರಶ್ನಿಸಿ, ಸಿಟ್ಟಿಗೆದ್ದು ಥಳಿಸಿದ್ದರು’ ಎಂದು ಹೇಳಿದ್ದಾರೆ. ಹಾಗೆಯೇ ಕೊಲಾಪುಡಿ ಯಾವುದೇ ಗುಂಪು ಅಥವಾ ಪಕ್ಷಕ್ಕೆ ಸೇರಿದವರಲ್ಲ ಎಂದು ಕೂಡ ಸ್ಪಷ್ಟೀಕರಣ ನೀಡಿದ್ದಾರೆ.
