ಒಂದು ವೇಳೆ ಭಾರತವೂ ಚೀನಾ ಉತ್ಪನ್ನಗಳ ಆಮದನ್ನು ನಿಲ್ಲಿಸಿದರೆ ನಮಗಾಗುವ ನಷ್ಟಕ್ಕಿಂತ ನಿಮ್ಮ ದೇಶವೂ ಎಂದೂ ಕಾಣದ ಆರ್ಥಿಕ ಹೊಡೆತ ಅನುಭವಿಸಬೇಕಾಗುತ್ತದೆ.

ನವದೆಹಲಿ(ಆ.14): ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವೆ ಬಿಗುವಿನ ಪರಿಸ್ಥಿತಿ ಉಂಟಾಗಿರುವ ಮಧ್ಯೆ ಚೀನಾ ಬೇರೆ ರೀತಿಯಲ್ಲಿ ಕ್ಯಾತೆ ತೆಗೆಯಲು ಹೊರಟಿದೆ. ಇತ್ತೀಚಿನ ದಿನಗಳಲ್ಲಿ ಚೀನಾ ಉತ್ಪನ್ನಗಳ ಬಳಕೆಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಚೀನಾ ಎಚ್ಚರಿಕೆ ನೀಡಿದೆ.

ಭಾರತವು ಚೀನೀ ಉತ್ಪನ್ನಗಳಿಗೆ ಸಂಬಂಧಿಸಿದಂತೆ ರಕ್ಷಣಾ ನೀತಿಯ ಸುಂಕವನ್ನು ಹೇರಬಾರದು.ಇದರಿಂದ ಎರಡು ದೇಶಗಳ ನಡುವಿನ ವ್ಯಾಪಾರಿ ಯುದ್ಧ ಮನೋಭಾವವನ್ನು ಪ್ರಚೋದಿಸಲು ಕಾರಣವಾಗುತ್ತದೆ ಚೀನಾದ ಸರ್ಕಾರಿ ನಿಯಂತ್ರಿತ ಮಾಧ್ಯಮವಾದ 'ಗ್ಲೋಬಲ್ ಟೈಮ್ಸ್' ತನ್ನ ಲೇಖನದ ಮೂಲಕ ಎಚ್ಚರಿಕೆ ನೀಡಿವೆ. ನವದೆಹಲಿಯು ವ್ಯಾಪಾರಿ ನೀತಿಯ ಅನ್ಯ ಮಾರ್ಗದ ಮೂಲಕ ತನ್ನ ದೇಶದ ಮೇಲೆ ಒತ್ತಡ ಹೇರುವುದರಿಂದ ಯಾವುದೇ ಪ್ರಯೋಜನವಿಲ್ಲ. ಜೊತೆಗೆ ತಾನೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಸಿದೆ.

ಒಂದು ವೇಳೆ ಭಾರತವೂ ಚೀನಾ ಉತ್ಪನ್ನಗಳ ಆಮದನ್ನು ನಿಲ್ಲಿಸಿದರೆ ನಮಗಾಗುವ ನಷ್ಟಕ್ಕಿಂತ ನಿಮ್ಮ ದೇಶವೂ ಎಂದೂ ಕಾಣದ ಆರ್ಥಿಕ ಹೊಡೆತ ಅನುಭವಿಸಬೇಕಾಗುತ್ತದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೊಟ್ಯಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಆರ್ಥಿಕ ದುಸ್ಥಿತಿಗೆ ನೀವು ತಲುಪುತ್ತೀರಿ. ನಮ್ಮ ಉತ್ಪನ್ನಗಳ ರೀತಿಯಲ್ಲಿ ಬೇರೆ ಯಾವ ದೇಶದ ಉತ್ಪನ್ನಗಳು ಇಷ್ಟು ಕಡಿಮೆ ಬೆಲೆಗೆ ಗುಣಮಟ್ಟದ ವಸ್ತುಗಳನ್ನು ನೀಡಿವುದಿಲ್ಲ' ಎಂದು ತಿಳಿಸಿದೆ.

ಈಗಾಗಲೆ ಚೀನಾದ 93 ಉತ್ಪನ್ನಗಳ ಮೇಲೆ ರಕ್ಷಣಾ ನೀತಿಯ ಸುಂಕವನ್ನು ವಿಧಿಸಿರುವುದು ಅತ್ಯಂತ ಕೆಟ್ಟ ಕ್ರಮವಾಗಿದ್ದು ಇದನ್ನು ಎದುರಿಸಲು ಭಾರತವು ಸಿದ್ದವಾಗಿರಬೇಕು. ಭಾರತ ಸರಕಾರವು ಚೀನಾದೊಂದಿಗೆ ವ್ಯಾಪಾರಿ ಸಂಬಂಧವನ್ನು ಕಡಿಮೆಗೊಳಿಸಲು ಅತ್ಯಂತ ಹೆಚ್ಚು ಉತ್ಸುಕವಾಗಿದೆ. ಇದು ನಮಗಿಂತಲೂ ನಿಮಗೆ ಹೆಚ್ಚು ಹಾನಿಯುಂಟಾಗುತ್ತದೆ'. ಮುಂದಿನ ದಿನಗಳಲ್ಲಿ ನೀವೇ ಪಶ್ಚಾತ್ತಾಪಪಡುವ ಸ್ಥಿತಿ ಒದಗಿ ಬರುತ್ತದೆ' ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.