ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಾರದ ಹಿನ್ನೆಲೆಯಲ್ಲಿ, ನಾಳೆ ಎಂದಿನಂತೆ ಸಾರಿಗೆ ಸಂಚಾರ ಇರುತ್ತದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು (ನ.27): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮವನ್ನು ವಿರೋಧಿಸಿ ಪ್ರತಿಪಕ್ಷಗಳು ಕರೆಕೊಟ್ಟಿರುವ ಆಕ್ರೋಶ ದಿವಸಕ್ಕೆ ಕರ್ನಾಟಕದಲ್ಲಿ ಬೆಂಬಲವಿಲ್ಲ.
ಆಕ್ರೋಶ ದಿವಸದ ಹೆಸರಿನಲ್ಲಿ ನವೆಂಬರ್ 28ರಂದು ಭಾರತ್ ಬಂದ್‌ಗೆ ಕೆಎಸ್’ಆರ್’ಟಿಸಿ, ಬಿಎಂಟಿಸಿ ಹಾಗೂ ಮೆಟ್ರೋ ಸಂಚಾರ ಸ್ಥಗಿತಗೊಳ್ಳುವುದಿಲ್ಲ. ರೈಲು ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಪ್ರತಿಭಟನಾಕಾರರು ತಡೆಯೊಡ್ಡಿದರೆ ಮಾತ್ರ ವ್ಯತ್ಯಯ ಉಂಟಾಗಲಿದೆ.
ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಾರದ ಹಿನ್ನೆಲೆಯಲ್ಲಿ, ನಾಳೆ ಎಂದಿನಂತೆ ಸಾರಿಗೆ ಸಂಚಾರ ಇರುತ್ತದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಕೂಡಾ ಅಕ್ರೋಶ ದಿವಸಕ್ಕೆ ಬೆಂಬಲವಿಲ್ಲವೆಂದು ಹೇಳಿದೆ. ನಾಳೆ ಎಂದಿನಂತೆ ಚಿತ್ರರಂಗದ ಕಾರ್ಯಚಟುವಟಿಕೆ ನಡೆಯಲಿದೆ, ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಎಂದಿನಂತೆ ಇರಲಿದೆ ಹಾಗೂ ನಾಳೆ ಸಿನಿಮಾಗಳ ಚಿತ್ರೀಕರಣಗಳು ನಡೆಯಲಿದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದಾರೆ.
ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸುವಂತೆ ಕಾಂಗ್ರೆಸ್ ಎಲ್ಲ ಬ್ಲಾಕ್ ಘಟಕಗಳಿಗೆ ಸೂಚನೆ ನೀಡಿದ್ದು, ಎಡಪಕ್ಷಗಳೂ ಬಂದ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಲಿವೆ.
‘ಆಕ್ರೋಶ್ ದಿವಸ್' ಹಿನ್ನೆಲೆಯಲ್ಲಿ ಸೋಮವಾರ ವಿಧಾನ ಮಂಡಲ ಅಧಿವೇಶನವನ್ನು ರದ್ದುಪಡಿಸಲಾಗಿದೆ. ಅಲ್ಲದೆ, ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಸ್ಥಳೀಯ ಪರಿಸ್ಥಿತಿ ಅವಲೋಕಿಸಿ, ಅಗತ್ಯಬಿದ್ದರೆ ರಜೆ ನೀಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
