ಇನ್ನೆರಡು ದಿನಗಳಲ್ಲಿ ಬೆಂಗಳೂರೇ ಇರೋಲ್ಲ ಎಂಬ ಸುದ್ದಿಯೊಂದನ್ನು ಖಾಸಗೀಯ ಕನ್ನಡ ವಾಹಿನಿಯೊಂದು ಭಿತ್ತರಿಸಿದ ಬೆನ್ನಲ್ಲೇ, ಮತ್ತೊಂದು ಆಘಾತಕಾರಿ ಸುದ್ದಿಯೊಂದನ್ನು ಕೆಲವು ಮಾಧ್ಯಮಗಳು ವರದಿ ಮಾಡುತ್ತಿದೆ. ಇಂಥದ್ದೊಂದು ಘಟನೆ ಘಟಿಸೋದು ಹೌದಾ?

ಹೊಸದಿಲ್ಲಿ: ಇನ್ನೆರಡು ದಿನಗಳಲ್ಲಿ ಬೆಂಗಳೂರೇ ಇರೋಲ್ಲ ಎಂಬ ಸುದ್ದಿಯೊಂದನ್ನು ಖಾಸಗೀಯ ಕನ್ನಡ ವಾಹಿನಿಯೊಂದು ಭಿತ್ತರಿಸಿದ ಬೆನ್ನಲ್ಲೇ, ಮತ್ತೊಂದು ಆಘಾತಕಾರಿ ಸುದ್ದಿಯೊಂದನ್ನು ಕೆಲವು ಮಾಧ್ಯಮಗಳು ವರದಿ ಮಾಡುತ್ತಿದೆ. ಮಾರ್ಚ್ 18ಕ್ಕೆ ಭೂಮಿಗೆ ಆಯಸ್ಕಾಂತೀಯ ಬಿರುಗಾಳಿ ಅಪ್ಪಳಿಸಲಿದೆ ಎಂದು ಹೇಳಲಾಗುತ್ತಿದ್ದು, ಅಂದು ದೂರ ಸಂಪರ್ಕ ಸೇರಿ ಹಲವು ಉಪಗ್ರಹ ಆಧಾರಿತ ಸೇವೆಗಳಲ್ಲಿ ವ್ಯತ್ಯಯವಾಗಲಿದ್ದು, ಮನುಷ್ಯನ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವ ಸಂಭವವಿದೆ ಎನ್ನಲಾಗುತ್ತಿದೆ.

ಆದರೆ, ಇಂಥ ಯಾವ ನೈಸರ್ಗಿಕ ವಿಕೋಪಗಳು ಸಂಭವಿಸುವುದಿಲ್ಲ, ಯಾವುದೇ ಭಯ ಬೀಳುವ ಸಾಧ್ಯತೆ ಇಲ್ಲವೆಂದು ವೈಜ್ಞಾನಿಕ ಸಂಸ್ಥೆಯೊಂದು ಸ್ಪಷ್ಟಪಡಿಸಿದ್ದು, ಭಯ ಬೀಳುವ ಆತಂಕವಿಲ್ಲವೆಂದು ಹೇಳಿದೆ.

ಸೌರ ಬಿರುಗಾಳಿಯೂ ಎಂದೂ ಕರೆಯುವ ಈ ನೈಸರ್ಗಿಕ ಪ್ರಕ್ರಿಯೆ ಅಪರೂಪವಾದರೂ, ಆಗೊಮ್ಮೆ ಈಗೊಮ್ಮೆ ಘಟಿಸುತ್ತಿರುತ್ತದೆ. ಸೂರ್ಯನಲ್ಲಿ ಸೃಷ್ಟಿಯಾದ ವಿದ್ಯುತ್ ಕಣಗಳನ್ನು ಒಳಗೊಂಡ ಸೌರ ಬಿರುಗಾಳಿ ಭೂಮಿಯ ಆಯಸ್ಕಾಂತೀಯ ವಲಯಕ್ಕೆ ಅಪ್ಪಳಿಸಿ, ಇಂಥದ್ದೊಂದು ಅನಾಹುತ ಸಂಭವಿಸುತ್ತದೆ. ಈ ಬದಲಾವಣೆಯಿಂದ ವಿದ್ಯುತ್ ವಾಹಕ ತಂತಿಗಳು, ಉಪಗ್ರಹದ ದಿಕ್ಸೂಚಿ ಹಾಗೂ ವಿಮಾನ ಹಾರಾಟಗಳಲ್ಲಿ ಸಾಮಾನ್ಯವಾಗಿ ವ್ಯತ್ಯಯವಾಗುತ್ತದೆ.

ಮಾನವನ ಆರೋಗ್ಯದ ಮೇಲೂ ಈ ಆಯಸ್ಕಾಂತಿಯ ಬಿರುಗಾಳಿಯಿಂದ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು, ವಾಂತಿ, ತಲೆ ಸುತ್ತು ಹಾಗೂ ರಕ್ತ ಸಂಚಾರ ಹೆಚ್ಚುಕಮ್ಮಿಯಾಗುತ್ತದೆ.

ನ್ಯಾಷನಲ್ ಓಷಿನಿಕ್ ಮತ್ತು ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (ಎನ್‌ಒಎಎ) ಇಂಥ ವಿದ್ಯಾಮಾನಗಳು ನಡೆಯುವ ಸಾಧ್ಯತೆ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲವೆಂದು ಸ್ಪಷ್ಟಪಡಿಸಿದೆ.

ಹವಾಮಾನ ಮುನ್ಸೂಚನಾ ವರದಿಯಲ್ಲಿ ರಷ್ಯಾದ ಸಂಸ್ಥೆಯೊಂದು ಆಯಸ್ಕಾಂತೀಯ ಅಲೆ ಭೂಮಿಯನ್ನು ಅಪ್ಪಳಿಸುವುದಾಗಿ ಹೇಳಿದ್ದು, ಇದರಿಂದ ಎಲ್ಲೆಡೆ ಭಯ ಸೃಷ್ಟಿಯಾಗಿತ್ತು. ಆದರೆ, ಇರುವ ದತ್ತಾಂಶಗಳನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದರಿಂದ ಇಂಥದ್ದೊಂದು ವರದಿ ಹೊರ ಬಿದ್ದಿದೆ ಎಂದು ಎನ್‌ಒಎಎ ಸ್ಪಷ್ಟಪಡಿಸಿದೆ.

ಏನಿದು ಆಯಸ್ಕಾಂತೀಯ ಬಿರುಗಾಳಿ?

ಮಾಮೂಲಿಗಿಂತ ಹೆಚ್ಚಿಗೆ ಸೌರ ಜ್ವಾಲೆ ಹೊರಸೂಸಿ, ಭೂಮಿಯ ಆಯಸ್ಕಾಂತಿಯ ವಲಯಕ್ಕೆ ಅಪ್ಪಳಿಸುವುದರಿಂದ ಆಯಸ್ಕಾಂತೀಯ ಬಿರುಗಾಳಿ ಸೃಷ್ಟಿಯಾಗುತ್ತದೆ. ಭೂಮಿಯ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಈ ಅಲೆ ಬೀಸುವ ಪರಿಣಾಮ ವಿಭಿನ್ನವಾಗಲಿದ್ದು, ಹೆಚ್ಚಾಗಿ ವಿಕಿರಣಗಳು ಹೊರ ಸೂಸುವುದಿಂದ ಮಾನವನ ಆರೋಗ್ಯದ ಮೇಲೆ ಹಾಗೂ ಕೆಲವು ಸೇವೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.