ಪಾಟ್ನಾ :  ಈಗಾಗಲೇ ಬಿಹಾರದಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ  ಬಿಜೆಪಿ - ಜೆಡಿಯು ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಮಾಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದುಮ ಜೆಡಿಯುಗೆ 12 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. 

ಇನ್ನು ಲೋಕಜನಶಕ್ತಿ ಪಕ್ಷಕ್ಕೆ 5 ಸ್ಥಾನಗಳನ್ನು ನೀಡಲಾಗಿದ್ದು ಆರ್ ಎಲ್ ಎಸ್ ಪಿಗೆ 2 ಸ್ಥಾನಗಳನ್ನು ನೀಡಲಾಗುತ್ತಿದೆ.  ಆದರೆ ಈ ಬಗ್ಗೆ ಜೆಡಿಎಯುನಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. 

ಗುರುವಾರ ಸೀಟು ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದ್ದು, ಆದರೆ ಈ ನಿರ್ಧಾರಕ್ಕೆ ಸಹಮತ ದೊರಕದೇ ಜೆಡಿಯು ಬಿಜೆಪಿಯಿಂದ ದೂರ ಉಳಿಯಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ. 

ಈ ಹಿಂದೆ ನಡೆದ ಚರ್ಚೆಯಂತೆ ಜೆಡಿಯು ಹಾಗೂ ಬಿಜೆಪಿ ಸಮಾನ ಸಂಖ್ಯೆಯಲ್ಲಿ ಸ್ಪರ್ಧೆ ಮಾಡುತ್ತದೆ ಎನ್ನಲಾಗಿತ್ತು. ಆದರೆ ಸದ್ಯ 20 - 12 ಸ್ಥಾನಗಳ ಹಂಚಿಕೆಯಾಗಿದೆ. 

ಆದ್ದರಿಂದ ಅಸಮಾಧಾನಗೊಂಡ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 2019ರ  ಲೋಕಸಭಾ ಚುನಾವಣೆ ವೇಳೆಗೆ ಎನ್ ಡಿಎ ಒಕ್ಕೂಟದಿಂದ ದೂರ ಉಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. ಅಲ್ಲದೇ ಮತ್ತೆ ಹಳೆಯ ಒಕ್ಕೂಟವಾದ ಮಹಾಘಟಬಂಧನವನ್ನು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಯು ವಕ್ತಾರರಾದ ನೀರಜ್ ಕುಮಾರ್ ಯಾರು ಹಗಲುಗನಸು ಕಾಣುತ್ತಿದ್ದಾರೋ ಅಂತವರೆಲ್ಲಾ ಇಂತಹ ರೂಮರ್ ಗಳನ್ನು ಹರಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈಗಾಗಲೇ ಎನ್ ಡಿಎ ಒಕ್ಕೂವನ್ನು ಒಪ್ಪಿಕೊಂಡಿದ್ದಾರೆ. ಇನ್ನೆಲ್ಲಿ ಸೀಟು ಹಂಚಿಕೆ ವಿಚಾರ ಅಸಮಾಧಾನಕ್ಕೆ ಕಾರಣವಾಗಲಿದೆ. ಸೀಟು ಹಂಚಿಕೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳ ಬಗ್ಗೆಯೂ ಅಂತಿಮ ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.