ನವದೆಹಲಿ [ಸೆ.12]:  ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ನೂತನ ಮೋಟಾರು ಕಾಯ್ದೆಯಡಿ ವಿಧಿಸಲಾಗುತ್ತಿರುವ ದಂಡದ ಪ್ರಮಾಣವನ್ನು ಕಡಿತ ಮಾಡಿದ ಗುಜರಾತ್‌ನ ಬಿಜೆಪಿ ಸರ್ಕಾರದ ಕ್ರಮದ ಬಗ್ಗೆ, ಕಾಯ್ದೆಯ ರೂವಾರಿಯೂ ಆಗಿರುವ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್‌ ಗಡ್ಕರಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇಂಥ ನಿಯಮಗಳು ಹಣ ಮಾಡುವ ಉದ್ದೇಶದಿಂದ ರೂಪಿಸಿದ್ದಲ್ಲ, ಬದಲಾಗಿ ಲಕ್ಷಾಂತರ ಜನರ ಜೀವ ಉಳಿಸುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.

ಮಂಗಳವಾರವಷ್ಟೇ ಗುಜರಾತ್‌ನ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ನೂತನ ಮೋಟಾರು ಕಾಯ್ದೆಯಡಿ ವಿಧಿಸಲಾಗುವ ದಂಡದ ಪ್ರಮಾಣವನ್ನು ಶೇ.90ರವರೆಗೂ ಕಡಿತ ಮಾಡಿತ್ತು. ಈ ಬಗ್ಗೆ ಯಾವುದೇ ರಾಜ್ಯದ ಹೆಸರನ್ನು ಪ್ರಸ್ತಾಪಿಸದೆಯೇ ಬುಧವಾರ ಪ್ರತಿಕ್ರಿಯೆ ನೀಡಿರುವ ಗಡ್ಕರಿ ‘ಪ್ರತಿ ವರ್ಷ ರಸ್ತೆ ಅಪಘಾತಗಳಿಗೆ 1.50 ಲಕ್ಷ ಜನ ಬಲಿಯಾಗುತ್ತಿದ್ದಾರೆ. ಸುಮಾರು 2-3 ಲಕ್ಷ ಜನ ಅಪಘಾತದಲ್ಲಿ ತಮ್ಮ ಕಾಲುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅವರ ಬಗ್ಗೆ ನಿಮಗೆ ಚಿಂತೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಹೊಸ ನಿಯಮವು ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆಯೇ ಹೊರತೂ, ಇದೇನು ಆದಾಯ ಸಂಗ್ರಹದ ಯೋಜನೆಯಲ್ಲ. ಎಲ್ಲಾ ರಾಜ್ಯಗಳು ತಮಿಳುನಾಡನ್ನು ಕಲಿಯಬೇಕು. ಅಲ್ಲಿ ಹೊಸ ನಿಯಮ ಜಾರಿಯಾದ ಬಳಿಕ ತಮಿಳುನಾಡಲ್ಲಿ ಅಪಘಾತ ಪ್ರಮಾಣದಲ್ಲಿ ಶೇ.28ರಷ್ಟುಇಳಿಕೆಯಾಗಿದೆ. ಹೊಸ ನಿಯಮ ಜಾರಿ ಬಳಿಕ ಸಾಕಷ್ಟುಬದಲಾವಣೆ ಕಂಡುಬರುತ್ತಿದೆ. ಕಾನೂನು ಉಲ್ಲಂಘನೆ ಮಾಡದಿರುವ ದೆಸೆಯಲ್ಲಿ ಜನ ಹೆಜ್ಜೆ ಇಡುತ್ತಿದ್ದಾರೆ. ಈ ವ್ಯವಸ್ಥೆಯ ಜನರ ಜೀವ ಉಳಿಸಲು ನೆರವಾಗಲಿದೆ. ಹೀಗಾಗಿ ದಂಡದ ಪ್ರಮಾಣ ಕಡಿಮೆ ಮಾಡದಂತೆ ರಾಜ್ಯಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ.