'ಮಾನವೀಯತೆ ಭಾರತದ ರಾಜಕಾರಣದ ಪ್ರಮುಖ ಆಧಾರಸ್ತಂಭ'| ಆಸ್ಪತ್ರೆಗೆ ದಾಖಲಾಗಿರುವ ಶಶಿ ತರೂರ್ ಭೇಟಿಯಾದ ನಿರ್ಮಲಾ ಸೀತಾರಾಮನ್| ದೇವಸ್ಥಾನದಲ್ಲಿ ತುಲಾಭಾರ ಸಮಯದಲ್ಲಿ ಕಬ್ಬಿಣದ ಚೈನ್ ಬಿದ್ದು ಗಾಯಗೊಂಡಿರುವ ತರೂರ್| ಶೀಘ್ರ ಗುಣಮುಖರಾಗುವಂತೆ ಹರಿಸಿದ ರಕ್ಷಣಾ ಸಚಿವೆ| ಟ್ವೀಟ್ ಮೂಲಕ ನಿರ್ಮಲಾ ಸೀತಾರಾಮನ್ ಗೆ ಧನ್ಯವಾದ ತಿಳಿಸಿದ ತರೂರ್|
ತಿರುವನಂತಪುರಂ(ಏ.16): ಭಾರತದ ರಾಜಕಾರಣವೇ ಹಾಗೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಕೇವಲ ರಾಜಕೀಯ ಅಖಾಡದಲ್ಲಿ ಮಾತ್ರ ಕಾಣ ಸಿಗುತ್ತವೆ. ಅದರಾಚೆ ಇರುವುದು ವಿರೋಧಿಗಳಿಗೂ ಒಳಿತನ್ನು ಬಯಸುವ ಶುದ್ಧ ಭಾರತೀಯ ಮನಸ್ಸು ಮಾತ್ರ.
ತುಲಾಭಾರ ಸಮಯದಲ್ಲಿ ಕಬ್ಬಿಣದ ಚೈನ್ ತುಂಡಾಗಿ ಬಿದ್ದ ಪರಿಣಾಮ, ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ತಿರುವನಂತಪುರಂನ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ತರೂರ್ ಆರೋಗ್ಯ ವಿಚಾರಿಸಿದರು. ಅಲ್ಲದೇ ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದರು.
ಈ ಕುರಿತು ಟ್ವೀಟ್ ಮಾಡಿರುವ ಶಶಿ ತರೂರ್, 'ಮಾನವೀಯತೆ ಭಾರತದ ರಾಜಕಾರಣದ ಪ್ರಮುಖ ಆಧಾರಸ್ತಂಭವಾಗಿದ್ದು, ತಮ್ಮ ಬಿಡುವಿರದ ಚುನಾವಣಾ ಪ್ರಚಾರದ ಮಧ್ಯೆಯೂ ತಮ್ಮ ಆರೋಗ್ಯ ವಿಚಾರಿಸಿದ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ..' ಎಂದು ಹೇಳಿದ್ದಾರೆ.
ತಿರುವನಂತಪುರದ ದೇವಾಲಯವೊಂದರಲ್ಲಿ ಶಶಿ ತರೂರ್ ಅವರಿಗೆ ಹಣ್ಣು ಮತ್ತು ಸಿಹಿಯಿಂದ ತುಲಾಭಾರ ಮಾಡಲಾಗಿತ್ತು. ಈ ವೇಳೆ ಕಬ್ಬಿಣದ ಚೈನ್ ತುಂಡಾಗಿ ಬಿದ್ದ ಪರಿಣಾಮ ಶಶಿ ತರೂರ್ ತೀವ್ರವಾಗಿ ಗಾಯಗೊಂಡಿದ್ದರು.
