ನವದೆಹಲಿ : ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದದಲ್ಲಿ ಭಾರಿ ಗೋಲ್‌ಮಾಲ್‌ ನಡೆದಿದೆ ಎಂದು ಕಳೆದ ಹಲವಾರು ತಿಂಗಳುಗಳಿಂದ ನಿರಂತರವಾಗಿ ಆರೋಪ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌ ಪಕ್ಷವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಸಭೆಯಲ್ಲಿ ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಹಣ ಸಿಗಲಿಲ್ಲ ಎಂಬ ಕಾರಣಕ್ಕೆ ರಾಷ್ಟ್ರೀಯ ಭದ್ರತೆಯನ್ನೂ ಕಡೆಗಣಿಸಿ, ರಫೇಲ್‌ ಒಪ್ಪಂದಕ್ಕೆ ಕಾಂಗ್ರೆಸ್‌ ತಡೆಯೊಡ್ಡಿತ್ತು ಎಂದು ಆಪಾದಿಸಿದ್ದಾರೆ. ಅಲ್ಲದೆ, ರಫೇಲ್‌ ವಿಚಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಿದೆ ಎಂದೂ ಭವಿಷ್ಯ ನುಡಿದಿದ್ದಾರೆ.

ಅನಿಲ್‌ ಅಂಬಾನಿ ಕಂಪನಿಗೆ ಮೋದಿ ನೆರವು ಮಾಡಿಕೊಟ್ಟಿದ್ದಾರೆ ಎಂಬ ರಾಹುಲ್‌ ಆರೋಪಕ್ಕೆ ಟಾಂಗ್‌ ನೀಡಿದ ನಿರ್ಮಲಾ, ಯುಪಿಎ ಅವಧಿಯಲ್ಲಿ ಅನಿಲ್‌ ಅಂಬಾನಿ ಕಂಪನಿಗೆ 53 ವಿನಾಯಿತಿ ಹಾಗೂ ರಿಯಾಯಿತಿಗಳನ್ನು ನೀಡಲಾಗಿತ್ತು ಎಂದು ಹೇಳಿದರು.

ಭಾರತ- ಫ್ರಾನ್ಸ್‌ ನಡುವೆ ಯಾವುದೇ ರಹಸ್ಯ ಒಪ್ಪಂದವಿಲ್ಲ ಎಂದು ಫ್ರಾನ್ಸ್‌ ನಾಯಕರೊಬ್ಬರು ತಮಗೆ ತಿಳಿಸಿದ್ದಾರೆ ಎಂದು ರಾಹುಲ್‌ ಹೇಳಿದ್ದಾರೆ. ರಾಹುಲ್‌ ಅವರು ತಮ್ಮ ಮಾತನ್ನು ಈ ಸದನದಲ್ಲಿ ದೃಢೀಕರಿಸುತ್ತಾರಾ ಎಂದು ಸವಾಲು ಹಾಕಿದರು.