Asianet Suvarna News Asianet Suvarna News

ನಿಫಾ : ರಾಜ್ಯದ 8 ಜಿಲ್ಲೆಗಳಲ್ಲಿ ಹೈ ಅಲರ್ಟ್

ನಿಫಾ ಮಹಾಮಾರಿ ಮತ್ತೆ ಕಾಲಿಟ್ಟಿದ್ದು ಈ ನಿಟ್ಟಿನಲ್ಲಿ ರಾಜ್ಯದ 8ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 

Nipah Outbreaks High Alert in Karnataka 8 Districts
Author
Bengaluru, First Published Jun 7, 2019, 10:24 AM IST

ಚಿಕ್ಕಮಗಳೂರು :  ಯಾವುದೇ ರೋಗ ಬಂದ ನಂತರ ಚಿಕಿತ್ಸೆ ಪಡೆಯುವ ಬದಲಿಗೆ ಆ ರೋಗ ಬರದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ, ಹೊಸದಾಗಿ ಕಂಡು ಬಂದಿರುವ ನಿಫಾ ವೈರಾಣು ಜನಸಾಮಾನ್ಯರಲ್ಲಿ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದರು. ಗುರುವಾರ ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ನಿಫಾ ವೈರಾಣು ಜ್ವರ ತಡೆ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಪಕ್ಕದ ರಾಜ್ಯ ಕೇರಳದಲ್ಲಿ ನಿಫಾ ವೈರಾಣು ಜ್ವರವು ಕಂಡು ಬಂದಿದ್ದು, ಮುನ್ನೆಚ್ಚರಿಕೆಯಾಗಿ ಜಿಲ್ಲೆಯಲ್ಲಿ ಇದನ್ನು ತಡೆಯಲು ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕ್ರಮಗೊಳ್ಳುವುದರೊಂದಿಗೆ ಸಾರ್ವಜನಿಕರಲ್ಲಿ ರೋಗದ ಲಕ್ಷಣಗಳು, ಅವುಗಳ ಹರಡುವಿಕೆ ಸೇರಿದಂತೆ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು.

ನಿಫಾ ವೈರಾಣು ಮೊಟ್ಟಮೊದಲಿಗೆ 1998ರಲ್ಲಿ ಮಲೇಷಿಯಾ, ಸಿಂಗಾಪುರ ದೇಶದಲ್ಲಿ ಕಂಡು ಬಂದಿದ್ದು, ಕಳೆದ ವರ್ಷ ಕೇರಳದಲ್ಲಿ ಕೆಲವರು ಈ ರೋಗದಿಂದ ಮರಣ ಹೊಂದಿದ್ದರು, ಈ ಬಾರಿಯೂ ಅಲ್ಲಿ ರೋಗದ ಇರುವಿಕೆ ಕಂಡು ಬಂದಿದೆ. ಜಿಲ್ಲೆಯ ಎನ್‌.ಆರ್‌. ಪುರ ತಾಲೂಕಿನಲ್ಲಿ ಕೇರಳ ಭಾಗದ ಜನರು ಹೆಚ್ಚು ಸಂಪರ್ಕ ಹೊಂದಿರುತ್ತಾರೆ. ಅಲ್ಲದೇ ವಾರದ ಕಡೆಯ ದಿನ ಕೇರಳದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು, ವೈರಾಣುಗಳು ಹರಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಸೋಂಕಿತ ಬಾವುಲಿಗಳ ನೇರ ಸಂಪರ್ಕದಿಂದ ಅಥವಾ ಬಾವುಲಿಗಳು ತಿಂದು ಬಿಟ್ಟಹಣ್ಣು ಹಂಪಲುಗಳನ್ನು ಸೇವಿಸುವುದರ ಮೂಲಕ, ಸೊಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಹಾಗೂ ಮಲ, ಮೂತ್ರ, ಜೊಲ್ಲು ಹಾಗೂ ರಕ್ತದ ನೇರ ಸಂಪರ್ಕದಿಂದ ಮನುಷ್ಯನಿಗೆ ಈ ವೈರಾಣು ಹರಡುವ ಸಾಧ್ಯತೆಗಳು ಇರುತ್ತವೆ ಎಂದರು.

ನಿಫಾ ವೈರಾಣು ಜ್ವರದಿಂದ ಬಳಲುತ್ತಿರುವವರಿಗೆ ಜ್ವರ, ತಲೆನೋವು, ತಲೆ ಸುತ್ತಿವಿಕೆ, ದಿಗ್ಭ್ರಮೆ, ಮಾನಸಿಕ ಗೊಂದಲ, ಜ್ಞಾನತಪ್ಪುವುದು ನಂತರ ಸಾವು ಸಂಭವಿಸಬಹುದಾಗಿರುತ್ತದೆ ಎಂದ ಅವರು, ಯಾವುದೇ ಸಾಮಾನ್ಯ ವೈರಲ್‌ ಜ್ವರ ಬಂದಾಗ ಅದನ್ನು ನಿರ್ಲಕ್ಷ್ಯ ವಹಿಸದೇ ತುರ್ತು ಎಂದು ತಿಳಿದು ಅದರ ಬಗ್ಗೆ ಎಚ್ಚರ ವಹಿಸಿ ಸೂಕ್ತ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಸೊಂಕಿತ ರೋಗಿಗಳು ಕಂಡು ಬಂದಲ್ಲಿ ಅವರಗೆ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿಟ್ಟು ಸೂಕ್ತ ಚಿಕಿತ್ಸೆ ನೀಡಬೇಕು. ಅಲ್ಲದೇ ಚಿಕಿತ್ಸೆ ನೀಡುವ ಡಾಕ್ಟರ್‌ ಹಾಗೂ ಸಿಬ್ಬಂದಿ ವರ್ಗದವರಿಗೆ ತರಬೇತಿ ನೀಡುವುದರ ಜೊತೆಗೆ ಸುರಕ್ಷತಾ ಸಾಧನಗಳನ್ನು ಒದಗಿಸಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್‌ ಮಾತನಾಡಿ, ಜನಸಾಮಾನ್ಯರು ನಿಫಾ ವೈರಾಣುವಿನಿಂದ ದೂರವಿರಲು ಯಾವುದೇ ಪ್ರಾಣಿ ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು, ಬಾವುಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸುವ ಸೆಂದಿ, ತಾಜಾ ತಾಳೆ ಹಣ್ಣಿನ ರಸ, ನೀರಾಗಳನ್ನು ಕುಡಿಯಬಾರದು. ಹಣ್ಣು ಮತ್ತು ಒಣ ಕಾರ್ಜೂರಗಳನ್ನು ಸೇವಿಸುವ ಮೊದಲು ಶುದ್ಧಿಕರಿಸಬೇಕು. ಅನಾರೋಗ್ಯದ ಹಂದಿ ಮತ್ತಿತರರ ಪ್ರಾಣಿಗಳೊಂದಿಗೆ ನೇರ ಸಂಪರ್ಕ ಹೊಂದಬಾರದು. ಬಾವುಲಿಗಳ ಪ್ರವೇಶ ತಪ್ಪಿಸಲು ತೆರೆದ ಬಾವಿಗಳಿಗೆ ಜಾಲರಿ ಅಳವಡಿಸಬೇಕು ಹಾಗೂ ಬಾವಿಯ ನೀರನ್ನು ಕುದಿಸದೇ ಉಪಯೋಗಿಸಬಾರದು, ಕೈಗಳನ್ನು ಸಂಪೂರ್ಣವಾಗಿ ಶುದ್ಧಿಕರಿಸಿ ಆಹಾರ ಸೇವನೆ ಮಾಡಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಅಶ್ವತ್‌ ಬಾಬು, ಡಾ.ಬಾಲಕೃಷ್ಣ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios