ಜು. 2 ರಿಂದ ಆಷಾಢ ಆರಂಭ | ಮಂಡ್ಯದಲ್ಲಿ ನಿಖಿಲ್ ಮನೆ ಖರೀದಿ ಮುಂದಕ್ಕೆ | ಹೊಸ ಮನೆಗೆ ‘ನಿಮ್ಮ ಮನೆ’ ಎಂದು ಹೆಸರನ್ನು ಇಡಲಾಗುವುದು ಎಂದು ನಿಖಿಲ್ ಹೇಳಿದ್ದರು 

ಮಂಡ್ಯ (ಜು. 01):  ಮಂಡ್ಯದಲ್ಲಿ ಮನೆ ಮಾಡುವ ನಿಖಿಲ್‌ ಕುಮಾರಸ್ವಾಮಿ ಕನಸು ಸದ್ಯಕ್ಕೆ ನನಸಾಗುವ ಸಾಧ್ಯತೆಗಳು ಕಾಣುತ್ತಿಲ್ಲ. ಏಕೆಂದರೆ ಮಂಗಳವಾರದಿಂದ ಆಷಾಡ ಮಾಸ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಭೂಮಿ, ಮನೆ, ವಾಹನಗಳ ಖರೀದಿ ಮಾಡುವುದಿಲ್ಲ ಹಾಗೂ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿನ್ನೆಲೆಯಲ್ಲಿ ನಿಖಿಲ್‌, ಮಂಡ್ಯದಲ್ಲಿ ಮನೆ ಮಾಡುವುದು ಇನ್ನೊಂದು ತಿಂಗಳು ತಡವಾಗಲಿದೆ ಎಂದು ಅವರ ಆಪ್ತವಲಯ ಹೇಳುತ್ತಿದೆ. ಕೆಲ ದಿನಗಳ ಹಿಂದೆ ಮಂಡ್ಯಗೆ ಆಗಮಿಸಿದ್ದ ನಿಖಿಲ್‌, ಮಂಡ್ಯದಿಂದ ಕೆಲವೇ ಕಿ.ಮೀ. ಅಂತರದಲ್ಲಿ ತೋಟ ಖರೀದಿಸಿ ಅಲ್ಲಿ ಮನೆ ನಿರ್ಮಿಸಲಾಗುವುದು. ಇದಕ್ಕೆ ಎಲ್ಲಾ ತಯಾರಿಗಳು ನಡೆದಿದ್ದು, ಶೀಘ್ರದಲ್ಲೇ ಮನೆ ಮಾಡುವೆ ಎಂದಿದ್ದರು.

ನಾನಿಲ್ಲದಿದ್ದರೂ ಆ ಮನೆಗೆ ಯಾರು ಬೇಕಾದರೂ ಬರಬಹುದು. ನಿಮ್ಮ ಕಷ್ಟಗಳಿಗೆ ಅಲ್ಲಿ ಸ್ಪಂದನೆ ದೊರೆಯಲಿದೆ ಎಂದು ಹೇಳಿದ್ದರು. ಅಲ್ಲದೇ ಆ ಮನೆಗೆ ‘ನಿಮ್ಮ ಮನೆ’ ಎಂದು ಹೆಸರನ್ನು ಇಡಲಾಗುವುದು ಎಂದು ಸಹ ಹೇಳಿದ್ದರು.

ಆದರೆ, ಇದೀಗ ಮಂಗಳವಾರದಿಂದ ಆಷಾಡ ಮಾಸ ಆರಂಭವಾಗಲಿದೆ. ಹಾಗಾಗಿ ಶ್ರಾವಣ ಮಾಸ ಆರಂಭಗೊಳ್ಳುವ ತನಕ ಹೊಸದಾಗಿ ಜಮೀನು ಖರೀದಿಗೆ ನಿಖಿಲ್‌ ಮುಂದಾಗುವುದಿಲ್ಲ ಎಂದು ಹೇಳಲಾಗಿದೆ.