Asianet Suvarna News Asianet Suvarna News

ಪೊಲೀಸರ ಸಮಯ ಪ್ರಜ್ಞೆ : ತಪ್ಪಿದ ಎಟಿಎಂ ದರೋಡೆ

ರಾತ್ರಿ ವೇಳೆ ಎಟಿಎಂ ಕೇಂದ್ರದಲ್ಲಿ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು, ಶನಿವಾರ ರಾತ್ರಿ ಮಾರತ್ತಹಳ್ಳಿ ರಸ್ತೆಯ ಸಿಟಿ ಬ್ಯಾಂಕ್ ಎಟಿಎಂ ಘಟಕಕ್ಕೆ ಬಂದಿದ್ದಾರೆ. ಆ ವೇಳೆ ಕಾವಲುಗಾರ ನಟರಾಜ್, ಎಟಿಎಂ ಹತ್ತಿರದ ತಮ್ಮ ಮನೆಗೆ ಹೋಗಿ ಮಲಗಿದ್ದರು. ಹಾಗಾಗಿ ಕಾವಲುಗಾರನಿಲ್ಲದ ಎಂಬುದು ಖಾತ್ರಿಪಡಿಸಿಕೊಂಡ ಆರೋಪಿಗಳು, ತಮ್ಮ ಸಂಚು ಕಾರ್ಯರೂಪಕ್ಕಿಳಿಸಲು ಮುಂದಾಗಿದ್ದರು.

Night Beat Police Stops ATM Thefts

ಬೆಂಗಳೂರು(ನ.26): ಖಾಸಗಿ ಬ್ಯಾಂಕ್‌ವೊಂದರ ಎಟಿಎಂ ಕೇಂದ್ರದಲ್ಲಿ ಹಣ ದೋಚಲು ಯತ್ನಿಸಿದ್ದ ಇಬ್ಬರು ದುಷ್ಕರ್ಮಿಗಳು ಮಾರತ್ತಹಳ್ಳಿ ಠಾಣೆ ಗಸ್ತು ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ತಡ ರಾತ್ರಿ ನಡೆದಿದೆ.  ರಾಮಮೂರ್ತಿ ನಗರದ ಜಾಕೋಬ್ ಹಾಗೂ ವಿನೋದ್ ಅಲಿಯಾಸ್ ಅಪ್ಪು ಬಂಧಿತರು. ಮಾರತ್ತಹಳ್ಳಿ ಮುಖ್ಯರಸ್ತೆಯ ಸಿಟಿ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ರಾತ್ರಿ 1.45  ಗಂಟೆಯಲ್ಲಿ ಈ ಕೃತ್ಯ ನಡೆದಿದೆ. ಆರೋಪಿಗಳನ್ನು ಬಂಧಿಸಿದ ಕಾನ್‌ಸ್ಟೇಬಲ್‌ಗಳಾದ ಉಸ್ಮಾನ್ ಹಾಗೂ ಬೀರಲಿಂಗಪ್ಪ ಅವರನ್ನು ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹಾಗೂ ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹ್ಮದ್ ಅಭಿನಂದಿಸಿದ್ದಾರೆ.

ಜಾಕೋಬ್ ಹಾಗೂ ವಿನೋದ್ ಅಪರಾಧ ಹಿನ್ನಲೆಯುಳ್ಳವರಾಗಿದ್ದು, ಅವರ ಮೇಲೆ ರಾಮಮೂರ್ತಿನಗರ ಹಾಗೂ ಕೆ.ಆರ್.ಪುರ ಠಾಣೆಗಳಲ್ಲಿ ಮನೆಗಳ್ಳತನ, ಸುಲಿಗೆ ಸೇರಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಅವರನ್ನು ಪೊಲೀಸರು ಬಂಧಿಸಿ ಜೈಲಿಗೂ ಕಳುಹಿಸಿದ್ದರು. ಜಾಮೀನು ಪಡೆದು ಹೊರಬಂದ ನಂತರ ತಮ್ಮ ಚಾಳಿ ಮುಂದುವರೆಸಿದ್ದರು. ಇತ್ತೀಚಿಗೆ ರಾತ್ರಿ ವೇಳೆ ಎಟಿಎಂ ಕೇಂದ್ರದಲ್ಲಿ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು, ಶನಿವಾರ ರಾತ್ರಿ ಮಾರತ್ತಹಳ್ಳಿ ರಸ್ತೆಯ ಸಿಟಿ ಬ್ಯಾಂಕ್ ಎಟಿಎಂ ಘಟಕಕ್ಕೆ ಬಂದಿದ್ದಾರೆ. ಆ ವೇಳೆ ಕಾವಲುಗಾರ ನಟರಾಜ್, ಎಟಿಎಂ ಹತ್ತಿರದ ತಮ್ಮ ಮನೆಗೆ ಹೋಗಿ ಮಲಗಿದ್ದರು. ಹಾಗಾಗಿ ಕಾವಲುಗಾರನಿಲ್ಲ ಎಂಬುದು ಖಾತ್ರಿಪಡಿಸಿಕೊಂಡ ಆರೋಪಿಗಳು, ತಮ್ಮ ಸಂಚು ಕಾರ್ಯರೂಪಕ್ಕಿಳಿಸಲು ಮುಂದಾಗಿದ್ದಾರೆ. ಬಳಿಕ ಎಟಿಎಂ ಪ್ರವೇಶಿಸಿದ ಜಾಕೋಬ್, ಹಣ ತುಂಬಿದ ಪೆಟ್ಟಿಗೆ ಸೈಜು ಕಲ್ಲಿನಿಂದ ಒಡೆದು ಹಾಕಲು ಯತ್ನಿಸಿದ್ದಾನೆ.

ಮತ್ತೊಬ್ಬ, ಎಟಿಎಂ ಹೊರಗೆ ನಿಂತು ಜನರ ಮೇಲೆ ನಿಗಾ ವಹಿಸಿದ್ದ. ಅದೇ ವೇಳೆಗೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಾದ ಉಸ್ಮಾನ್ ಹಾಗೂ ಬೀರಲಿಂಗಪ್ಪ, ಮಾರತ್ತಹಳ್ಳಿ ಮುಖ್ಯರಸ್ತೆಯಲ್ಲಿ ಬೈಕ್ ಚಲಾಯಿಸಿಕೊಂಡು ಬಂದಿದ್ದಾರೆ. ಆಗ ಎಟಿಎಂ ಕೇಂದ್ರದ ಬಳಿ ವ್ಯಕ್ತಿ ಯೊಬ್ಬನಿಂತಿರುವುದನ್ನು ಕಂಡು ಅನುಮಾನ ಗೊಂಡ ಸಿಬ್ಬಂದಿ, ತಕ್ಷಣವೇ ಆ ಎಟಿಎಂ ಕೇಂದ್ರದ ಬಳಿಗೆ ಧಾವಿಸಿದ್ದಾರೆ. ದಿಢೀರ್ ಪ್ರತ್ಯಕ್ಷರಾದ ಪೊಲೀಸರನ್ನು ಕಂಡ ಕೂಡಲೇ ಭಯಗೊಂಡು ವಿನೋದ್ ಓಡಿಹೋಗಿದ್ದಾನೆ. ಅಷ್ಟರಲ್ಲಿ ಎಟಿಎಂ ಘಟಕದೊ ಗಿದ್ದ ಜಾಕೋಬ್ ಕೂಡಾ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ ಆತನನ್ನು ಸಿಬ್ಬಂದಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕೂಡಲೇ ಹಿರಿಯ ಅಧಿಕಾರಿಗಳಿಗೆ ಕೃತ್ಯದ ಬಗ್ಗೆ ಸಿಬ್ಬಂದಿ ತಿಳಿಸಿದರು. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪಿಎಸ್‌ಐ ಗುರುಪ್ರಸಾದ್ ಅವರು, ತಪ್ಪಿಸಿಕೊಂಡ ಮತ್ತೊಬ್ಬನಿಗೆ ತಕ್ಷಣವೇ ಕಾರ್ಯಾಚರಣೆಗಿಳಿದರು. ಇದಾದ ಕೆಲ ಹೊತ್ತಿನಲ್ಲೇ ಮಾರತ್ತಹಳ್ಳಿ ಸಮೀಪ ನಿರ್ಜನ ಪ್ರದೇಶದಲ್ಲಿ ಅವಿತುಕೊಂಡಿದ್ದ ವಿನೋದ್ ಸಹ ಸಿಕ್ಕಿಬಿದ್ದಿದ್ದ. ಕೃತ್ಯ ಬಳಿಕ ಕಾವಲುಗಾರನ ಮೊಬೈಲ್ ನಂಬರ್ ಪತ್ತೆ ಹಚ್ಚಿ, ನಂತರ ಆತನಿಗೆ ಕರೆ ಮಾಡಿ ಕರೆಸಲಾಯಿತು. ಇನ್ನೂ ಹತ್ತು ಹದಿನೈದು ನಿಮಿಷ ಎಟಿಎಂ ಬಳಿಗೆ ಸಿಬ್ಬಂದಿ ಹೋಗಲು ತಡವಾಗಿದ್ದರೂ ಆರೋಪಿಗಳು ಹಣ ದೋಚುತ್ತಿದ್ದರು. ಗಸ್ತು ಸಿಬ್ಬಂದಿಯಿಂದ ಕಳ್ಳತನ ಕೃತ್ಯ ತಪ್ಪಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos
Follow Us:
Download App:
  • android
  • ios