ನವದೆಹಲಿ[ಜು.16]: 2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿ ನಂತರ ಅಸ್ತಿತ್ವಕ್ಕೆ ಬಂದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಭಾರತೀಯರು ಹಾಗೂ ಭಾರತೀಯ ಹಿತಾಸಕ್ತಿಗಳ ಮೇಲೆ ವಿದೇಶದಲ್ಲಿ ನಡೆಯುವ ಉಗ್ರರ ದಾಳಿ ಪ್ರಕರಣಗಳ ತನಿಖೆ ನಡೆಸುವ ಅಧಿಕಾರ ಕಲ್ಪಿಸುವ ಮಸೂದೆಗೆ ಲೋಕಸಭೆ ಸೋಮವಾರ ಅಂಗೀಕಾರದ ಮುದ್ರೆಯೊತ್ತಿದೆ.

ಸೈಬರ್‌ ಕ್ರೈಮ್‌ ಹಾಗೂ ಮಾನವ ಕಳ್ಳ ಸಾಗಣೆ ಪ್ರಕರಣಗಳ ತನಿಖೆ ಅನುಮತಿಯನ್ನೂ ನೀಡುವ ‘ರಾಷ್ಟ್ರೀಯ ತನಿಖಾ ದಳ (ತಿದ್ದುಪಡಿ) ಮಸೂದೆ-2019’ ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ.

ಎನ್‌ಐಎ ಕಾಯ್ದೆಯನ್ನು ನಿರ್ದಿಷ್ಟಸಮುದಾಯದ ವಿರುದ್ಧ ಸರ್ಕಾರ ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಪ್ರತಿಪಕ್ಷಗಳ ವಾದವನ್ನು ಗೃಹ ಸಚಿವ ಅಮಿತ್‌ ಶಾ ಅವರು ಚರ್ಚೆ ವೇಳೆ ಅಲ್ಲಗಳೆದರು. ಮೋದಿ ಸರ್ಕಾರಕ್ಕೆ ಅಂತಹ ಯಾವುದೇ ಉದ್ದೇಶ ಇಲ್ಲ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದೇ ಸರ್ಕಾರದ ಗುರಿ. ಕ್ರಮ ಕೈಗೊಳ್ಳುವಾಗ ಆರೋಪಿತನ ಧರ್ಮದ ಬಗ್ಗೆ ಗಮನಹರಿಸುವುದಿಲ್ಲ. ಎನ್‌ಐಎಗೆ ಅಧಿಕಾರ ನೀಡುವ ವಿಚಾರದಲ್ಲಿ ಸಂಸತ್ತು ಒಂದೇ ದನಿಯಲ್ಲಿ ಮಾತನಾಡುವ ಮೂಲಕ ಭಯೋತ್ಪಾದಕರು ಹಾಗೂ ವಿಶ್ವಕ್ಕೆ ಸಂದೇಶ ನೀಡಬೇಕು ಎಂದು ಮನವಿ ಮಾಡಿದರು.

ಭಯೋತ್ಪಾದನೆ ನಿಗ್ರಹಕ್ಕೆ ರೂಪಿಸಲಾಗಿದ್ದ ‘ಪೋಟಾ’ ಕಾಯ್ದೆಯನ್ನು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ರದ್ದುಗೊಳಿಸಿತ್ತು. ದುರ್ಬಳಕೆಯಾಗುತ್ತಿದೆ ಎಂಬ ಕಾರಣಕ್ಕೆ ಆ ಕ್ರಮ ಕೈಗೊಂಡಿದ್ದಲ್ಲ, ತನ್ನ ಮತ ಬ್ಯಾಂಕ್‌ ರಕ್ಷಿಸಿಕೊಳ್ಳಲು. ಪೋಟಾ ರದ್ದು ನಂತರ ಭಯೋತ್ಪಾದಕ ದಾಳಿಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅದೇ ಯುಪಿಎ ಸರ್ಕಾರ 2008ರಲ್ಲಿ ಎನ್‌ಐಎ ಹುಟ್ಟುಹಾಕಿತು ಎಂದು ಹೇಳಿದರು.