"ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಮಾಲಿನ್ಯ ನಿಯಂತ್ರಣ ಮಂಡಳಿಗಳ ಹೆಚ್ಚುವರಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಜಂಟಿ ತಪಾಸಣಾ ಸಮಿತಿ ರಚಿಸುವುದು; ಕೆರೆಗೆ ತ್ಯಾಜ್ಯ ಬಿಡದಂತೆ ನೋಡಿಕೊಳ್ಳುವುದು ಮತ್ತು ಕೆರೆ ಸ್ವಚ್ಛತೆ ಮಾಡುವುದು ಸಮಿತಿಯ ಹೊಣೆಯಾಗಿಸಬೇಕು."

ನವದೆಹಲಿ(ಏ. 19): ಬೆಳ್ಳಂದೂರು ಕೆರೆಗೆ ಬೆಂಕಿ ಹತ್ತಿಕೊಂಡ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಇಂದು ಬಿಬಿಎಂಪಿ ಮತ್ತು ಸರಕಾರಕ್ಕೆ ಚಾಟಿ ಬೀಸಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಕೂಡ ಕೆರೆಗೆ ಕಲುಷಿತ ನೀರು, ಕೈಗಾರಿಕಾ ತ್ಯಾಜ್ಯ ಇತ್ಯಾದಿ ಮಾಲಿನ್ಯ ಸೇರದಂತೆ ಕ್ರಮ ತೆಗೆದುಕೊಳ್ಳಬೇಕು. ಕೆರೆ ಹೂಳೆತ್ತಿ ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ. ಎನ್'ಜಿಟಿಯ ಆದೇಶ ಬಂದ ಬೆನ್ನಲ್ಲೇ ಬಿಬಿಎಂಪಿ ಅವರು ನೂತನ ಸುತ್ತೋಲೆಯನ್ನು ಹೊರಡಿಸಿದ್ದಾರೆ.

ಗ್ರೀನ್ ಟ್ರಿಬ್ಯುನಲ್ ಮಧ್ಯಂತರ ಆದೇಶಗಳೇನು?
1) ಬೆಳ್ಳಂದೂರು ಕೆರೆಯ ಮಲಿನಕ್ಕೆ ಕಾರಣವಾಗಿರುವ ಸುತ್ತಮುತ್ತಲಿನ ಕೈಗಾರಿಕೆಗಳನ್ನು ಕೂಡಲೇ ಮುಚ್ಚಬೇಕು
2) ತ್ಯಾಜ್ಯಗಳನ್ನು ಕೆರೆಗೆ ಬಿಡುವ ಕೈಗಾರಿಕೆಗಳು ಮತ್ತು ಕಟ್ಟಡಗಳಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿ
3) ಕೆರೆಯಲ್ಲಿ ಮತ್ತು ಕೆರೆ ಸುತ್ತಮುತ್ತಲ ಬಫರ್ ಝೋನ್'ನಲ್ಲಿ ಯಾವುದೇ ಕಾರಣಕ್ಕೂ ಕಸ ಹಾಕಲು ಅವಕಾಶ ಇಲ್ಲ
4) ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಮಾಲಿನ್ಯ ನಿಯಂತ್ರಣ ಮಂಡಳಿಗಳ ಹೆಚ್ಚುವರಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಜಂಟಿ ತಪಾಸಣಾ ಸಮಿತಿ ರಚಿಸುವುದು; ಕೆರೆಗೆ ತ್ಯಾಜ್ಯ ಬಿಡದಂತೆ ನೋಡಿಕೊಳ್ಳುವುದು ಮತ್ತು ಕೆರೆ ಸ್ವಚ್ಛತೆ ಮಾಡುವುದು ಸಮಿತಿಯ ಹೊಣೆಯಾಗಿಸಬೇಕು.
5) ಟೆಂಡರ್ ಕರೆಯುವ ಅವಶ್ಯಕತೆ ಇಲ್ಲ. ಏ.20ರ ಬೆಳಗ್ಗೆಯಿಂದಲೇ ಕೆರೆ ಹೂಳೆತ್ತುವ ಕೆಲಸ ಆರಂಭವಾಗಲಿ
6) ಮೇ 18 ರೊಳಗಾಗಿ ಬೆಳ್ಳಂದೂರು ಕೆರೆ ಸ್ವಚ್ಛತೆ ಬಗ್ಗೆ ಟ್ರಿಬ್ಯುನಲ್'ಗೆ ವರದಿ ಕೊಡಿ

ಇಂದು ಬೆಳಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆ 2017ರ ಮಾರ್ಚ್ 30ರ ಬಿಬಿಎಂಪಿ ಸುತ್ತೋಲೆಯನ್ನು ವಕೀಲರ ಕಡೆಯಿಂದಲೇ ನ್ಯಾ| ಸ್ವತಂತ್ರಕುಮಾರ್ ಓದಿಸಿದರು. 2016 ರಲ್ಲಿ ಗ್ರೀನ್ ಟ್ರಿಬ್ಯುನಲ್ ನೀಡಿದ ಆದೇಶಕ್ಕೆ ಮೊದಲೇ ಕಟ್ಟಡ ಪರವಾನಿಗೆ ಪಡೆದವರಿಗೆ ಅನ್ವಯ ಆಗುವುದಿಲ್ಲ ಎಂದು ಬಿಬಿಎಂಪಿ ಆಯುಕ್ತರು ಹೊರಡಿಸಿದ್ದ ಸುತ್ತೋಲೆ ಬಗ್ಗೆ ಅಸಮಾಧಾನಗೊಂಡ ಪೀಠ ಕೂಡಲೇ ಆಯುಕ್ತರನ್ನು ಕರೆಸಿ ಅವರನ್ನು ಸೇವೆಯಿಂದ ವಜಾಗೊಳಿಸಿ ನ್ಯಾಯಾಂಗ ನಿಂದನೆ ಹಾಕಬೇಕು ಎಂದು ಹೇಳಿತು. ಹಾಗೆ ಹೇಳುತ್ತಿದ್ದಂತೆ ನ್ಯಾಯಮೂರ್ತಿಗಳ ಎದುರು ಹೋಗಿ ಕೈಮುಗಿದು ನಿಂತ ಬಿಬಿಎಂಪಿ ಜಂಟಿ ಆಯುಕ್ತರು ಬೆಷರತ್ ಕ್ಷಮೆಯಾಚಿಸಿ ಸುತ್ತೋಲೆ ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ ನಂತರವಷ್ಟೇ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಕೋಪ ಸ್ವಲ್ಪ ಇಳಿಯಿತು.

ಇದಾದ ಬಳಿಕ ಬಿಬಿಎಂಪಿಯು ತನ್ನ ಹಳೆಯ ಸುತ್ತೋಲೆಯನ್ನು ಹಿಂತೆಗೆದುಕೊಂಡು, ಹೊಸ ಸುತ್ತೋಲೆಯನ್ನು ಹೊರಡಿಸಿತು.