ಬೆಂಗಳೂರು :  ತೀವ್ರ ಬಿಸಿಲಿನಿಂದ ಬಳಲಿದ ನಾಡಿಗೆ ವರುಣನ ಸಿಂಚನವಾಗಿದೆ. ರಾಜ್ಯದ ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ತಂಪಾಗಿದೆ. 

ಕಾವಿನಿಂದ ಕುದಿಯುತ್ತಿದ್ದ ಉದ್ಯಾನನಗರಿಯಲ್ಲಿಯೂ ಕೂಡ ಬುಧವಾರ ಮೊದಲ ಮಳೆಯ ಸಿಂಚನವಾಗಿದ್ದು, ಏಕಾಏಕಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. 

ಗುಡುಗು- ಮಿಂಚು ಸಹಿತ 73 ಮಿ.ಮೀ.ವರೆಗೆ ಸುರಿದ ಭಾರಿ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಗಾಳಿ-ಮಳೆಗೆ ನಗರದ ವಿವಿಧೆಡೆ ಹತ್ತಾರು ಮರಗಳು ಧರೆಗುರುಳಿವೆ. 

ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡು ಹಾಗೂ ರಾಜ್ಯದ ಹಲವು ಪ್ರದೇಶದಲ್ಲಿ ಮಳೆಯಾಗಿದೆ. ಈ ಮಳೆಯು ಗುರುವಾರ ಮತ್ತು ಶುಕ್ರವಾರವೂ ಮುಂದುವರೆಯುವ ಮುನ್ಸೂಚನೆ ಇದೆ. ಹೀಗಾಗಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆ ನಿರೀಕ್ಷಿಸಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.