ಸಬ್ಸಿಡಿ ಸಿಲಿಂಡರ್‌ 2 ರು., ಸೀಮೆಣ್ಣೆ 26 ಪೈಸೆ ಏರಿಕೆಎಸ್‌ಬಿಐ ಠೇವಣಿ ಬಡ್ಡಿದರ ಶೇ.0.5ರಷ್ಟುಇಳಿಕೆಯಾವುದೇ ಸಮಯದಲ್ಲಿಅಣ್ವಸ್ತ್ರ ಪರೀಕ್ಷೆ: ಕೊರಿಯಾ ಇವಿಎಂ ಜತೆ ಮುದ್ರಿತ ಚೀಟಿಗಳ ಎಣಿಕೆಗೆ ಚು.ಆಯೋಗ ಚಿಂತನೆ ಪಿಎಚ್‌ಡಿ: ಆಧಾರ್‌ ಬಹಿರಂಗಕ್ಕೆ ಬ್ರೇಕ್‌13 ಕೋಟಿ ಆಧಾರ್‌ ನಂಬರ್‌ ಸೋರಿಕೆ: ವರದಿ

ಸಬ್ಸಿಡಿ ಸಿಲಿಂಡರ್‌ 2 ರು., ಸೀಮೆಣ್ಣೆ 26 ಪೈಸೆ ಏರಿಕೆ

ನವದೆಹಲಿ: ಸಬ್ಸಿಡಿ ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್‌ಗೆ 2 ರು. ಮತ್ತು ಸೀಮೆಎಣ್ಣೆ ದರವನ್ನು 26 ಪೈಸೆ ಏರಿಸಲಾಗಿದೆ. ಸಣ್ಣ ಏರಿಕೆಗಳ ಮೂಲಕ ಸಬ್ಸಿಡಿ ಕಡಿತಕ್ಕೆ ಸರ್ಕಾರ ಮುಂದಾಗಿದೆ. ಹೀಗಾಗಿ ಸಬ್ಸಿಡಿ ರಹಿತ ಅಡುಗೆ ಅನಿಲದ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಬೆಂಗಳೂರಿ ನಲ್ಲಿ ಸಬ್ಸಿಡಿ ಸಿಲಿಂಡರ್‌ ದರ ಇನ್ನು 450.50 ರು. ಆಗಲಿದೆ. ಕಳೆದಬಾರಿ ಸಬ್ಸಿಡಿ ಸಿಲಿಂಡರ್‌ ದರವನ್ನು 5.57 ರು. ಏರಿಕೆ ಮಾಡಲಾಗಿತ್ತು.

ಎಸ್‌ಬಿಐ ಠೇವಣಿ ಬಡ್ಡಿದರ ಶೇ.0.5ರಷ್ಟುಇಳಿಕೆ
ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್‌ ಎನಿಸಿರುವ ಎಸ್‌ಬಿಐ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.0.5ರಷ್ಟುಇಳಿಕೆ ಮಾಡಿದೆ. ಹೊಸ ನಿಯಮದ ಪ್ರಕಾರ, ಎರಡರಿಂದ ಮೂರು ವರ್ಷಗಳಿಗೆ ಇರಿಸಿದ್ದ ಠೇವಣಿ ಹಣಕ್ಕೆ ಈ ಮುಂಚೆ ಇದ್ದ ಶೇ. 6.75ರ ಬದಲಾಗಿ ಶೇ. 6.25ರಷ್ಟುಬಡ್ಡಿ ಲಭ್ಯವಾಗಲಿದೆ. ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 7.25 ರಿಂದ ಶೇ. 6.75ಕ್ಕೆ ಇಳಿಕೆ ಮಾಡಲಾಗಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ. 3 ವರ್ಷದಿಂದ 10 ವರ್ಷಗಳ ನಡುವಿನ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 6.50ಕ್ಕೆ ಇಳಿಕೆ ಮಾಡಲಾಗಿದೆ. ಹೊಸ ಬಡ್ಡಿದರ 2017ರ ಏ.29ರಿಂದ ಜಾರಿಗೆ ಬಂದಿದೆ. ಒಂದು ವಾರದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಒಂದು ವರ್ಷದಿಂದ 455 ದಿನಗಳ ಠೇವಣಿಗೆ ಅತ್ಯಧಿಕ ಶೇ.6.90 ಬಡ್ಡಿಯನ್ನು ನೀಡಲಾಗುತ್ತಿದೆ.

ಯಾವುದೇ ಸಮಯದಲ್ಲಿಅಣ್ವಸ್ತ್ರ ಪರೀಕ್ಷೆ: ಕೊರಿಯಾ
ಸೋಲ್‌: ಅಮೆರಿಕ ಹಾಗೂ ಉತ್ತರ ಕೊರಿಯಾ ನಡುವೆ ಸಮರ ಸದೃಶ ಪರಿಸ್ಥಿತಿ ಸೃಷ್ಟಿಯಾಗಿರುವಾಗಲೇ, ನಮ್ಮ ನಾಯಕರು (ಕಿಮ್‌ ಜಾಂಗ್‌ ಉನ್‌) ಹೇಳಿದ ಸಮಯ ಹಾಗೂ ಜಾಗದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಲು ಸಿದ್ಧವಿರುವುದಾಗಿ ಉತ್ತರ ಕೊರಿಯಾ ಹೇಳಿಕೊಂಡಿದೆ. ಅಲ್ಲದೆ, ಅಮೆರಿಕ ಆಯ್ದುಕೊಳ್ಳುವ ಯಾವುದೇ ಆಯ್ಕೆಗೂ ಪ್ರತಿಕ್ರಿಯೆ ನೀಡಲು ಸಂಪೂರ್ಣ ಸನ್ನದ್ಧವಾಗಿರುವುದಾಗಿ ಗುಡುಗಿದೆ. ಉತ್ತರ ಕೊರಿಯಾಗೆ ತಕ್ಕ ಪಾಠ ಕಲಿಸಲು ಅಮೆರಿಕ ತುದಿಗಾಲಿನಲ್ಲಿ ನಿಂತಿದೆ. ಆದಾಗ್ಯೂ ಮಣಿಯದ ಕೊರಿಯಾ, ತನ್ನ 11 ವರ್ಷ ಅವಧಿಯಲ್ಲಿ 6ನೇ ಅಣ್ವಸ್ತ್ರ ಪರೀಕ್ಷೆಯನ್ನು ನಡೆಸಲು ಸಜ್ಜಾಗುತ್ತಿದೆ ಎಂದು ಹೇಳಲಾಗಿದೆ.

ಇವಿಎಂ ಜತೆ ಮುದ್ರಿತ ಚೀಟಿಗಳ ಎಣಿಕೆಗೆ ಚು.ಆಯೋಗ ಚಿಂತನೆ
ನವದೆಹಲಿ: ವಿದ್ಯುನ್ಮಾನ ಮತಯಂತ್ರದ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ , ಮರು ಎಣಿಕೆಯ ವೇಳೆ ವಿದ್ಯುನ್ಮಾನ ಮತಯಂತ್ರದ ಫಲಿತಾಂಶ ಮತ್ತು ಮತದಾ ರರು ಮರುಪರಿಶೀಲಿಸಬಹುದಾದ ಪೇಪರ್‌ ಆಡಿಟ್‌ ಟ್ರಯಲ್‌ ಯಂತ್ರದ ಮುದ್ರಿತ ಚೀಟಿಯನ್ನು ಚು.ಆಯೋಗ ಎಣಿಕೆ ಮಾಡಲಿದೆ. ಈ ಸಂಬಂಧ ಮರು ಎಣಿಕೆ ನಿಯಮಾವಳಿ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಪಿಎಚ್‌ಡಿ: ಆಧಾರ್‌ ಬಹಿರಂಗಕ್ಕೆ ಬ್ರೇಕ್‌
ನವದೆಹಲಿ: ಪಿಎಚ್‌ಡಿ ವಿದ್ಯಾರ್ಥಿಗಳ ಆಧಾರ್‌ ನಂಬರ್‌ ಸಹಿತ, ಅವರಿಗೆ ಸಂಬಂಧಿಸಿದ ಮಾಹಿತಿ ಗಳನ್ನು ಬಹಿರಂಗ ಪಡಿಸುವಂತೆ ನಿರ್ದೇಶಿಸಿದ್ದ ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ), ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಎಲ್ಲ ಸಂಶೋಧನಾ ವಿದ್ಯಾರ್ಥಿಗಳ ಮಾಹಿತಿ ವಿವಿಯ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವಂತೆ ಕಳೆದ ಮಾ. 10ರಂದು ಎಲ್ಲ ವಿವಿಗಳಿಗೆ ಯುಜಿಸಿ ಆದೇಶಿಸಿತ್ತು. ಪಿಎಚ್‌ಡಿ ನೋಂದಣಿ ಸಂಖ್ಯೆ, ಉಸ್ತುವಾರಿಯ ವಿವರಣೆ, ಅನುದಾನ ನೀಡುತ್ತಿರುವ ಸಂಸ್ಥೆ, ಸಂಶೋಧನಾ ವಿಷಯ ಮತ್ತು ಆಧಾರ್‌ ವಿವರಣೆ ಪ್ರಕಟಿಸುವಂತೆ ಯುಜಿಸಿ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

13 ಕೋಟಿ ಆಧಾರ್‌ ನಂಬರ್‌ ಸೋರಿಕೆ: ವರದಿ
ನವದೆಹಲಿ: ಆಧಾರ್‌ ಕಾರ್ಡ್‌ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪಗಳ ಬೆನ್ನಲ್ಲೇ, ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳಿಗಾಗಿ ನಿರ್ಮಿಸಿರುವ ನಾಲ್ಕು ವೆಬ್‌ಸೈಟ್‌ಗಳಲ್ಲಿ 13 ಕೋಟಿ ಆಧಾರ್‌ ನಂಬರ್‌ಗಳು ಮತ್ತು 10 ಕೋಟಿ ಬ್ಯಾಂಕ್‌ ಅಕೌಂಟ್‌ ನಂಬರ್‌ಗಳು ಸುಲಭವಾಗಿ ಲಭಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಸೆಂಟರ್‌ ಫಾರ್‌ ಇಂಟರ್‌ನೆಟ್‌ ಆ್ಯಂಡ್‌ ಸೊಸೈಟಿ ಸೋಮವಾರ ವರದಿ ಬಿಡುಗಡೆ ಮಾಡಿದ್ದು, ಆಧಾರ್‌ ನಂಬರ್‌ಗಳನ್ನು ಬಹಿರಂಗಪಡಿಸುವುದು ಅಕ್ರಮವಾಗಿದ್ದರೂ, ಸರ್ಕಾರದ ವೆಬ್‌ಸೈಟ್‌ಗಳಲ್ಲಿ ಅವು ಸುಲಭವಾಗಿ ಲಭ್ಯವಾಗುತ್ತಿವೆ. ಒಂದು ವೇಳೆ ಎಲ್ಲಾ ಸರ್ಕಾರಿ ವೆಬ್‌ಸೈಟ್‌ಗಳು ಇದೇ ರೀತಿಯ ನಿರ್ಲಕ್ಷ್ಯ ತೋರಿದ್ದಾದರೆ ಆಧಾರ್‌ ಸೋರಿಕೆ 23 ಕೋಟಿ ತಲುಪಬಹುದು ಎಂದು ವರದಿ ತಿಳಿಸಿದೆ.