Asianet Suvarna News Asianet Suvarna News

ಹೊಸ ಹಗರಣ: ಮಕ್ಕಳ ಯೂನಿಫಾರ್ಮ್'ನಲ್ಲಿ ಕಮಿಷನ್ ಕೀಳೋ ಹಾವೇರಿ ಶಿಕ್ಷಕ ಖದೀಮರು

ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ ಅಂತಾರೆ. ಆದರೆ, ಗುರುವೇ ದುಡ್ಡಿನ ಗುಲಾಮನಾಗಿಬಿಟ್ರೆ ಕಥೆ ಏನು..? ಹಾಗೆ ಹಣದ ಗುಲಾಮರಾಗಿ, ಮಕ್ಕಳ ಯೂನಿಫಾರ್ಮಲ್ಲೂ ದುಡ್ಡು ತಿಂತಿರೋವ್ರ ಕಥೆ ಇದು. ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಟೀಚರ್​ಗಳು ಮಾಡ್ತಾ ಇರೋ ಯೂನಿಫಾರ್ಮ್ ಗೋಲ್​'ಮಾಲ್ ಬಯಲಾಗಿದೆ.

new uniform commission scam exposed by sting operation of suvarna news

ಹಾವೇರಿ(ಜುಲೈ 14): ಮಕ್ಕಳಿಗೆ ಪಾಠ ಮಾಡಿ ಅವರನ್ನು ತಿದ್ದಿತೀಡಿ ಉನ್ನತ ಪ್ರಜೆಯಾಗಿಸುವ ಮಹೋನ್ನತ ಕಾಯಕದ ಶಿಕ್ಷಕರು ಹಾದಿ ತಪ್ಪಿದರೆ ಆಗುವ ಪ್ರಮಾದ ಕಡಿಮೆಯಲ್ಲ. ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತದೆ. ಹಾವೇರಿ ಜಿಲ್ಲೆಯ ಶಾಲಾ ಮಕ್ಕಳ ಯೂನಿಫಾರ್ಮ್ ಮತ್ತು ಶೂಗಳ ಹಂಚಿಕೆಯಲ್ಲಿ ದೊಡ್ಡ ಗೋಲ್ಮಾಲ್ ನಡೆದಿರುವುದು ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ. ದುರದೃಷ್ಟವಶಾತ್, ಈ ಕಳ್ಳಾಟದಲ್ಲಿ ಶಾಲೆಯ ಶಿಕ್ಷಕರು, ಶಿಕ್ಷಣಾಧಿಕಾರಿಗಳೂ ಭಾಗಿಯಾಗಿರುವುದು ತಿಳಿದುಬಂದಿದೆ. ಹಾವೇರಿಯ ಶಿಗ್ಗಾಂವ ತಾಲೂಕಿನಲ್ಲಿ ಹಲವು ಟೀಚರ್'ಗಳು ಕಮಿಷನ್ ದಂಧೆಗಿಳಿದುಬಿಟ್ಟಿದ್ದಾರೆ. ಪೋಷಕರೊಬ್ಬರಿಂದ ಮಾಹಿತಿ ಪಡೆದು ಬೆನ್ನು ಹತ್ತಿದ ಸುವರ್ಣನ್ಯೂಸ್ ಹಲವು ಸರಕಾರಿ ಶಾಲೆಗಳಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿ ಸತ್ಯ ಬಯಲು ಮಾಡಿದೆ.

ರಹಸ್ಯ ಕಾರ್ಯಾಚರಣೆಗಳು

1) ಜೇಕಿನಕಟ್ಟಿ ಸರ್ಕಾರಿ ಸ್ಕೂಲು..!
ಅದು ಜೇಕಿನಕಟ್ಟಿ ಉರ್ದು ಮತ್ತು ಕನ್ನಡ ಸ್ಕೂಲು. ಅಲ್ಲಿ ಎರಡೂ ಭಾಷೆಯ ಮಕ್ಕಳು ಒಟ್ಟಿಗೇ ಕಲಿಯುತ್ತಿದ್ದಾರೆ. 100ಕ್ಕೂ ಹೆಚ್ಚು ಮಕ್ಕಳಿರುವ ಆ ಶಾಲೆಯಲ್ಲಿ ಟೀಚರ್​ಗಳಿಗೇ ಒಂದು ಯೂನಿಫಾರ್ಮಿಗೆ 30 ರೂಪಾಯಿ ಕೊಡಬೇಕಂತೆ..

ಶಿಕ್ಷಕ ಕಲಾಲ್ - ನಿಮಗೆ ಸಿಆರ್​ಪಿ ಅಂತಾ ಇರ್ತಾರೆ. ಅವರು ಕೆಲವು ಕಡೆ ಹೇಳಿರ್ತಾರೆ. ನಾವು ಮತ್ತೆ ಮೇಲಿನವ್ರಿಗೆ ಕೊಡಬೇಕು.
ಸುವರ್ಣ ನ್ಯೂಸ್ - ಇಲ್ಲಿ ಏನ್ ನಡೆದೈತ್ರಿ ಈಗ..?ದ
ಶಿಕ್ಷಕ ಕಲಾಲ್ - ನೀವು ಹೇಳಿದ್ದು ಕರೆಕ್ಟ್ ಐತ್ ಬಿಡ್ರಿ..?
ಸುವರ್ಣ ನ್ಯೂಸ್ - ನಾವು ತಿರುಗಾ ಎಕ್ಸ್​ಟ್ರಾ...ಬಿಇಓ ಅವರಿಗೂ ಕೊಡಬೇಕೇನ್ರಿ..?
ಶಿಕ್ಷಕ ಕಲಾಲ್ - ಮತ್ತೆ ನಮಗೆ ಮೇಲಿನವ್ರು ಇರ್ತಾರೆ. ಬಿಇಓನೂ ಇರ್ತಾರೆ.  ನೀವು ಅಂತ ಅಲ್ಲ. ನೀವು ಡೈರೆಕ್ಟ್ ಆಗಿ ತಗೊಂಡ್ರೆ ನೀವು ಕೊಡಬೇಕು. ನಾವು ತಗೊಂಡ್ರೆ, ನಾವು ಕೊಡಬೇಕು.
ಸುವರ್ಣ ನ್ಯೂಸ್ - ಈಗ ಅವರು(ಬಿಇಓ) ಬೇರೆ ಕಡೆ ಮಾಡಿದಾರೇನ್ರಿ..ಸರ..?
ಶಿಕ್ಷಕ ಕಲಾಲ್ - ಹೌದು, ಹೌದು. ಕೆಲವು ಮಾಡಿದಾರೆ..

ಈ ಕಲಾಲ್ ಅಷ್ಟು ಸುಲಭವಾಗಿ ಬಲೆಗೆ ಬೀಳಲಿಲ್ಲ. ಆದರೆ, ದಂಧೆಯ ಮೂಲವನ್ನು ಬಾಯ್ಬಿಟ್ಟಿದ್ದ.

2) ಶಿವಪುರ ತಾಂಡಾ ಸರ್ಕಾರಿ ಶಾಲೆ:
ಜೇಕಿನಕಟ್ಟಿಯಿಂದ ನಾವು ಶಿವಪುರ ತಾಂಡಾದ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಕೊಟ್ಟೆವು. ನೀವು ಬಟ್ಟೆ ತಂದಿದ್ದರೆ, ಇಲ್ಲಿಯೇ ಆರ್ಡರ್ ಕೊಡ್ತಿದ್ದೆ ಎಂದ ಹೆಡ್​ಮಾಸ್ಟರ್ ಹಿರೇಮಠ್, ನಮ್ಮನ್ನು ಹೊರಗೆ ಕಳಿಸಿದ್ರು. ಆತ ಎಲ್ಲಿಯೂ ಕಮಿಷನ್ ವಿಚಾರ ಮಾತನಾಡಲಿಲ್ಲ.

3) ಗುಡ್ಡದ ಚನ್ನಾಪುರ ಸರ್ಕಾರಿ ಶಾಲೆ:
ಗುಡ್ಡದ ಚನ್ನಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಆರ್​.ಕೆ.ಕೆಂಡದಮಠ್. ಅಲ್ಲಿ ಖರೀದಿ ಮುಗಿದು ಹೋಗಿತ್ತು. ಮುಂದಿನ ವರ್ಷ ನಿಮಗೇ ಆರ್ಡರ್ ಕೊಡ್ತೀವಿ ಅಂತಾ ಕಳಿಸಿದ್ರು.

4) ಸಿಆರ್'​ಪಿ ಚಂದ್ರು ದೊಡ್ಡಮನಿ:
ಈತ ಬಿಇಓ ಎಂ.ಎಚ್. ಪಾಟೀಲರಿಗೆ ಬಹಳ ಆಪ್ತ.  ಚಂದ್ರು ದೊಡ್ಡಮನಿ, ಸಿಆರ್​ಪಿ. ಈತನೇ ಯೂನಿಫಾರ್ಮ್, ಶೂ ಕಮಿಷನ್ ದಂಧೆಯ ಕಿಂಗ್​ಪಿನ್. ಈತ ನಮಗೆ ಎದುರಾಗಿದ್ದು  ನಾರಾಯಣಪುರ ಶಾಲೆಯಲ್ಲಿ. ಅವನು ಮೊದಲು ಕೇಳಿದ ಪ್ರಶ್ನೆಯೇ ಅದು. ಏನ್ ರೇಟು..?

ಚಂದ್ರು ದೊಡ್ಡಮನಿ, ಸಿಆರ್​ಪಿ - ಒಂದ್ ಜೊತೆ ಹೆಂಗೆ. ಏನ್ ರೇಟು..?
ಸುವರ್ಣ ನ್ಯೂಸ್ - ಅದೇ ಸರ್, ಏನ್ ರೇಟ್ ನಡೆದದ..ಅಷ್ಟೇ ಕೊಡ್ತಿವಿ ಸರ್..
ಚಂದ್ರು ದೊಡ್ಡಮನಿ, ಸಿಆರ್​ಪಿ - ಅದೇ ರೀ, ಏನ್ ರೇಟ್ ಹೇಳ್ತೀರಿ, ನಂಗೆಷ್ಟ್ ಕೊಡ್ತೀರಿ..?

ಡೀಲ್ ಕುದುರಿತ್ತು. ಅವರ ಲೆಕ್ಕಾಚಾರ ನೋಡಿ, ಒಂದು ಯೂನಿಫಾರ್ಮಿಗೆ 80 ರೂಪಾಯಿ ಕಮಿಷನ್. ಸ್ಕೂಲ್ ಹೆಡ್'​ಮಾಸ್ಟರ್'​ಗೆ 30 ರೂಪಾಯಿ, ಬಿಇಓ ಮತ್ತು ಸಿಆರ್​ಪಿಗೆ ತಲಾ 20 ರೂಪಾಯಿ ಕಮಿಷನ್. ಇನ್ನು ಶೂಗಳಲ್ಲಿ ಒಂದು ಜೊತೆ ಶೂಗೆ 100 ರೂಪಾಯಿ. ಹೆಡ್​ಮಾಸ್ಟರ್​ಗೆ 80 ರೂಪಾಯ್, ಬಿಇಓ ಮತ್ತು ಸಿಆರ್​ಪಿಗೆ ತಲಾ 10 ರೂಪಾಯ್.

ದೊಡ್ಡಮನಿ - ನಾವು ಸಿಆರ್'​ಪಿಯೋವ್ರು ಮುಟ್ಟಿಸ್ತಿವಿ
ಸುವರ್ಣ ನ್ಯೂಸ್ - ನೀವು ಮುಟ್ಟಿಸ್ತೀರಾ..? ನಾವು ಮತ್ತೆ ಬಿಇಓಗೆ ಏನೂ ಕೊಡಬೇಕಾಗಿಲ್ವಾ..?
ದೊಡ್ಡಮನಿ - ಇಲ್ಲ, ನಮಗೆ ಕೊಡಿ. ನಾವು ಅವರಿಗೆ ತಲುಪಿಸ್ತೀವಿ.
ಸುವರ್ಣ ನ್ಯೂಸ್ - 80 ಬಿಟ್ಟು, ಮತ್ತೆ ನಿಮಗೆ ಕೊಡಬೇಕಾ..?
ದೊಡ್ಡಮನಿ - ಇಲ್ಲ, ಇಲ್ಲ. ಆ 80 ರೂಪಾಯಿಯಲ್ಲೇ ಮಾಡ್ಕೋತೀವಿ

ಹೀಗೆ ಚಂದ್ರು ದೊಡ್ಡಮನಿಯ ಜಾಲ ಬಹಳ ದೊಡ್ಡದು. ಅಡ್ವಾನ್ಸ್​'ನ್ನೂ ಕೇಳಿದ್ದ ದೊಡ್ಡಮನಿ. ಆತನಿಗೆ 500 ರೂಪಾಯಿ ಟೋಕನ್ ಅಡ್ವಾನ್ಸ್ ಕೊಟ್ಟು ಅಲ್ಲಿಂದ ಹೊರಟ್ವು. ಅದು ಅಷ್ಟಕ್ಕೇ ನಿಲ್ಲಲಿಲ್ಲ. ನಾರಾಯಣಪುರ ಶಾಲೆಯಿಂದ ಕಲ್ಯಾಣ ಹಿರಿಯ ಪ್ರಾಥಮಿಕ ಶಾಲೆಗೆ ಕಳುಹಿಸಿಕೊಟ್ಟ ಚಂದ್ರು, ಅಲ್ಲಿನ ಹೆಡ್'​ಮಾಸ್ಟರ್ ಜೊತೆ ಫೋನ್'​ನಲ್ಲೇ ಡೀಲ್ ಕುದುರಿಸ್ದ.

5) ಕಲ್ಯಾಣ ಸರ್ಕಾರಿ ಶಾಲೆ:
ಎಸ್.ಜಿ. ಹಿರೇಮಠ, ಮುಖ್ಯ ಶಿಕ್ಷಕ - ನಾನು ಕಳೆದ ಬಾರಿ ಹಾಗೇ ಮಾಡಿಸಿಬಿಟ್ಟಿದ್ದೆ. ಆಮೇಲೆ ಸಿಆರ್​ಪಿ ನನ್ನನ್ನ ಬಾಯಿಗೆ ಬಂದಂತೆ ಬೈದ್ರು. ಬಿಇಓ ಕೂಡಾ ಅವಮಾನ ಮಾಡಿದ್ರು

6) ನಾರಾಯಣಪುರ ಸರ್ಕಾರಿ ಶಾಲೆ
ಅದಾದ ಮೇಲೆ ಅದೇ ಚಂದ್ರು ದೊಡ್ಡಮನಿ ಶಿಫಾರಸಿನ ಮೇಲೆ ನಾರಾಯಣಪುರ ಪ್ರಾಥಮಿಕ ಶಾಲೆಯ ಹೆಡ್​'ಮಾಸ್ಟ್ರು ಎನ್​.ವಾಯ್.ಕಟ್ಟಿ ಕಾದು ಕುಳಿತಿದ್ದರು.

ಸುವರ್ಣ ನ್ಯೂಸ್ - ನೋಡಿ ಸರ್, ಚಂದ್ರು ಸರ್ ಬರೆದುಕೊಟ್ಯಾರ. ಯಾರಿಗೆ ತಲುಪಿಸಬೇಕ್ರಿ..?
ಎನ್.ವೈ. ಕಟ್ಟಿ, ಮುಖ್ಯ ಶಿಕ್ಷಕ - ನಮ್ ಕಡೆ ಕೊಡ್ರಿ. ನಾವು ಅವರಿಗೆ ತಲುಪಿಸ್ತೀವಿ.

7) ಇಬ್ರಾಹಿಂಪುರ ಸರ್ಕಾರಿ ಶಾಲೆ:
ನಾರಾಯಣಪುರ ಸರ್ಕಾರಿ ಶಾಲೆಯ ನಂತರ ಇಬ್ರಾಹಿಂಪುರ ಶಾಲೆಯಿಂದಲೂ ಫೋನ್ ಬಂತು. ಫೋನ್ ಮಾಡಿದ್ದವರು ಅಲ್ಲಿನ ಮುಖ್ಯ ಶಿಕ್ಷಕ ಹೆಚ್. ಮೇಕಳಿ.

ವೈ. ಎಂ. ಮೇಕಳಿ, ಮುಖ್ಯ ಶಿಕ್ಷಕ - ಮೊದ್ಲೇನ್ ಮಾಡ್ತಿದ್ರು. ನಮಗೆ 30 ಕೊಡ್ತಿದ್ರು. ಮಿಕ್ಕಿದ್ದು ಅವರೇ ಮಾಡಿಕೊಂಡು ಬಿಡ್ತಿದ್ರು. ಆದ್ರೆ ಬಟ್ಟೆ ಚೆನ್ನಾಗಿರ್ತಾ ಇರಲಿಲ್ಲ. ಅದಕ್ಕೆ ನಾವು ಈ ಸಿಸ್ಟಂ ಮಾಡ್ಕೊಂಡ್ವು. ಈಗ ಏನ್ ಮಾಡ್ರಿ, ಮಾತನಾಡಿಕೊಂಡಿದ್ದೀರಲ್ಲ. ಹಾಗೆ ಮುಗಿಸಿಬಿಡ್ರಿ. ನೆಕ್ಸ್ಟ್ ಟೈಂ ಬನ್ನಿ. ಬಿಗಿಯಾಗಿ ಬನ್ನಿ.

ಇಡೀ ದಂಧೆಯ ಮುಖ್ಯ ಸೂತ್ರದಾರ ಚಂದ್ರು ದೊಡ್ಡಮನಿ. ನಮ್ಮ ಬಳಿ ಹಣ ತೆಗೆದುಕೊಂಡವನೂ ಅವನೇ.

ಚಂದ್ರು ದೊಡ್ಡಮನಿ, ದಂಧೆಕೋರ - ಒಟ್ಟು 6 ಸಾವ್ರ. ಮೊನ್ನೆ ಒಂದ್ ಸಾವ್ರ ಕೊಟ್ಟಿದ್ದು. ಈಗ ಒಂದ್ ಸಾವ್ರ ಕೊಟ್ರಿ. ತಗದ್ರ, ಇನ್ನು 4 ಸಾವಿರದ 100 ರೂಪಾಯ್ ಆಗುತ್ತೆ. ನೀವು ಕೊಡೋದು.

ಇದು ಡೀಲ್ ಮಾಸ್ಟರ್​ ಚಂದ್ರು ದೊಡ್ಡಮನಿಯ ಲಂಚಾವತಾರ. ಆದರೆ, ಈ ದಂಧೆಯಲ್ಲಿ ಇವನೊಬ್ಬನೇ ಇದ್ದರೆ, ಆತಂಕಪಡಬೇಕಾದ ಅಗತ್ಯ ಇರಲಿಲ್ಲ. ಆದರೆ, ಇವನ ಈ ದಂಧೆಯಲ್ಲಿ ಉದ್ದಕ್ಕೂ ಶಿಕ್ಷಕರು, ಮುಖ್ಯಶಿಕ್ಷಕರು ಭಾಗಿಯಾಗಿದ್ದಾರೆ. ಯೂನಿಫಾರ್ಮು, ಶೂಗಳಲ್ಲೂ ದುಡ್ಡು ಹೊಡೆಯುವ ಇವರನ್ನು ಮೇಷ್ಟ್ರುಗಳು ಎನ್ನಬೇಕಾ..?

ಕುಟುಕು ಕಾರ್ಯಾಚರಣೆ: ಸಂತೋಷ ಶೆಟ್ಟೆಪ್ಪನವರ್,​ ಸುವರ್ಣ ನ್ಯೂಸ್,​ ಹಾವೇರಿ

Follow Us:
Download App:
  • android
  • ios