ಬೆಂಗಳೂರು (ಸೆ.17): ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಉಂಟಾದ ಗಲಭೆ ಸಂದರ್ಭದಲ್ಲಿ 42 ಬಸ್​ಗಳಿಗೆ ಬೆಂಕಿ ಹಚ್ಚಿರುವ ಪ್ರಕರಣಕ್ಕೆ ಹೊಸ ಟ್ವಿಸ್ಟ್ ವರದಿಯಾಗಿದೆ.

ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆಗೆ ಪ್ರತಿಯಾಗಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಆ ಸಂದರ್ಭದಲ್ಲಿ ಕೆಪಿಎನ್ ಸಂಸ್ಥೆಗೆ ಸೇರಿದ 42 ಬಸ್ಸುಗಳಿಗೆ ಬೆಂಕಿ ಹಚ್ಚಿ ಸುಡಲಾಗಿತ್ತು. ಆರ್.ಆರ್.ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಆದರೆ ಇದೀಗ ಬಸ್​ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೆಪಿಎನ್ ಟ್ರಾವೆಲ್ಸ್ ಸಿಬ್ಬಂದಿಯಿಂದಲೇ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಕೆಪಿಎನ್ ಟ್ರಾವೆಲ್ಸ್ ಸಿಬ್ಬಂದಿಯೇ ಬಸ್ಸುಗಳಿಗೆ ಬೆಂಕಿ ಹಚ್ಚಿರುವ ಬಗ್ಗೆ ಕೆಪಿಎನ್ ಬಸ್​ ಚಾಲಕ ವೆಂಕಟಚಲಂ ತನ್ನ ದೂರಿನಲ್ಲೇ ಸಂದೇಹ ವ್ಯಕ್ತಪಡಿಸಿದ್ದಾರೆಂದು ಸುವರ್ಣ ನ್ಯೂಸ್ ಗೆ ಸಿಐಡಿ ಮೂಲಗಳು ತಿಳಿಸಿವೆ.