ಹುಬ್ಬಳ್ಳಿ[ಜೂ.24]: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರು ಭಾನುವಾರ ಬೆಳಗಾವಿಯಿಂದ ಹುಬ್ಬಳ್ಳಿವರೆಗೆ ರೈಲಿನಲ್ಲಿ ಚಲಿಸಿ ವಿವಿಧ ಕಾಮಗಾರಿಗಳು, ರೈಲು ನಿಲ್ದಾಣಗಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ, ಬೆಳಗಾವಿಯಿಂದ ಬೆಂಗಳೂರಿಗೆ ಹೊಸ ರೈಲು ಸಂಚಾರ ಆರಂಭಿಸುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಬೆಳಗಾವಿ ಭಾಗದ ಜನರ ಬಹುದಿನಗಳ ಬೇಡಿಕೆಯೊಂದು ಈಡೇರಿದಂತಾಗಿದೆ.

14 ಬೋಗಿಗಳನ್ನು ಹೊಂದಿರುವ ಈ ರೈಲು ಮುಂದಿನ ವಾರದಿಂದಲೇ ಸಂಚಾರ ಆರಂಭಿಸಲಿದೆ. 3 ಎಸಿ, 7 ಸ್ಲೀಪರ್‌ ಬೋಗಿಗಳನ್ನು ಹೊಂದಿರುವ ಈ ರೈಲು ರಾತ್ರಿ 9ಕ್ಕೆ ಬೆಳಗಾವಿಯಿಂದ ಹೊರಟು ಬೆಳಗ್ಗೆ 7ಕ್ಕೆ ಬೆಂಗಳೂರು ತಲುಪಲಿದೆ. ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಿ ಎಂದು ಅಧಿಕಾರಿಗಳ ಜತೆಗಿನ ಸಭೆ ವೇಳೆ ಅಂಗಡಿ ಅವರು ಭಾನುವಾರ ಸೂಚನೆ ನೀಡಿದರು.

ಪರಿಶೀಲನೆ:

ಬೆಳಗಾವಿಯಿಂದ ಹುಬ್ಬಳ್ಳಿವರೆಗೆ ವಿಶೇಷ ಪರಿಶೀಲನಾ ರೈಲಿನಲ್ಲಿ ಭಾನುವಾರ ಪ್ರಯಾಣಿಸಿದ ಸಚಿವ ಅಂಗಡಿ, ಈ ಮಾರ್ಗದ ಜೋಡಿ ರೈಲು ಮಾರ್ಗ ಕಾಮಗಾರಿ ಹಾಗೂ ವಿವಿಧ ರೈಲು ನಿಲ್ದಾಣಗಳನ್ನು ಪರಿಶೀಲಿಸಿದರು. ನಂತರ ಹುಬ್ಬಳ್ಳಿಯ ರೈಲು ಸೌಧದಲ್ಲಿ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ, ಹೊಸ ರೈಲು ಸಂಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದರು. ವಿವಿಧ ಕಾಮಗಾರಿಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳಗಾವಿ ರೈಲು ನಿಲ್ದಾಣದ ಪ್ಲಾಟ್‌ಫಾಮ್‌ರ್‍- 1ರಲ್ಲಿ ಬೆಳಗಾವಿ ಇತಿಹಾ ಸಾರುವ ಮ್ಯೂಸಿಯಂ ಸ್ಥಾಪಿಸಲು ಸೂಚಿಸಿದ ಅಂಗಡಿ ಅವರು, ಮೈಸೂರು- ಧಾರವಾಡ ರೈಲನ್ನು ಮೀರಜ್‌ವರೆಗೂ ವಿಸ್ತರಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ನೈಋುತ್ಯ ರೈಲ್ವೆ ವಲಯದಲ್ಲಿ ಕೈಗೊಳ್ಳಲಾಗುತ್ತಿರುವ ಡಬ್ಲಿಂಗ್‌ ಸೇರಿ ಎಲ್ಲ ಯೋಜನೆಗಳನ್ನು ಶೀಘ್ರವಾಗಿ ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕು. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ. ನಿಗದಿತ ಕಾಲಮಿತಿಯಲ್ಲೇ ಎಲ್ಲ ಕಾಮಗಾರಿಗಳೆಲ್ಲ ಪೂರ್ಣವಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೈಋುತ್ಯ ರೈಲ್ವೆ ವ್ಯವಸ್ಥಾಪಕ ಅಜಯ ಕುಮಾರ್‌ ಸಿಂಗ್‌, ಹೆಚ್ಚುವರಿ ವ್ಯವಸ್ಥಾಪಕ ಬಿ.ಬಿ.ಸಿಂಗ್‌, ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ್‌, ಚೀಫ್‌ ಎಲೆಕ್ಟ್ರಿಕಲ್‌ ಎಂಜಿನಿಯರ್‌ ಬಿ.ಜಿ.ಮಲ್ಯ ಹಾಗೂ ಇತರ ಅಧಿಕಾರಿಗಳಿದ್ದರು.