ತೆರಿಗೆದಾರನ ಪತ್ನಿ ವಿದೇಶಕ್ಕೆ ಹೋಗಿ ಫೋಟೋ ಹಾಕ್ಕೊಂಡ್ರೂ ಸಿಗುತ್ತೆ ಮಾಹಿತಿತೆರಿಗೆ ವಂಚಕರ ಪತ್ತೆ ತಂತ್ರಾಂಶ ಗುತ್ತಿಗೆ ‘ಎಲ್ ಆ್ಯಂಡ್ ಟಿ’ಗೆ₹650 ಕೋಟಿಗೆ ಗುತ್ತಿಗೆ ಪಡೆದ ಎಲ್ ಆ್ಯಂಡ್ ಟಿ
ಮುಂಬೈ: ತೆರಿಗೆ ವಂಚಕರು ಹೊಂದಿರುವ ಫೇಸ್’ಬುಕ್, ಟ್ವೀಟರ್, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮಗಳ ಮೇಲೆ ಆದಾಯ ತೆರಿಗೆ ಇಲಾಖೆಯವರು ಕಣ್ಣಿಟ್ಟಿದ್ದು ಈ ಹಿಂದೆಯೇ ಗೊತ್ತಿದ್ದ ವಿಷಯವೇ. ಅದಕ್ಕೆಂದೇ ಈಗ ಕೇಂದ್ರ ಸರ್ಕಾರ ‘ಎಲ್ ಆ್ಯಂಡ್ ಟಿ’ ಕಂಪನಿ ಜತೆ 650 ಕೋಟಿ ರು. ಒಪ್ಪಂದ ಮಾಡಿಕೊಂಡಿದ್ದು, ತೆರಿಗೆ ವಂಚಕರ ಮಾಹಿತಿ ವಿಶ್ಲೇಷಿಸಿ ನೀಡಲು ನಿಯೋಜಿಸಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಸರ್ಕಾರ 500 ರು. ಹಾಗೂ 1000 ರು. ನೋಟುಗಳನ್ನು ರದ್ದು ಮಾಡಿತ್ತು. ಆದರೆ ಶೇ.99ರಷ್ಟು ರದ್ದಾದ ನೋಟುಗಳು ಆರ್‌ಬಿಐಗೆ ವಾಪಸು ಬಂದ ನಂತರ ಕಪ್ಪುಹಣ ಹೆಚ್ಚುಕಮ್ಮಿ ಬಿಳಿಯಾಗಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ. ಆದರೆ ವಾಪಸು ಬಂದ ರದ್ದಾದ ನೋಟುಗಳಲ್ಲಿ ಕಪ್ಪು ಎಷ್ಟು? ಬಿಳಿ ಎಷ್ಟು ಎಂಬ ತಲಾಶೆಗೆ ಈಗ ಸರ್ಕಾರ ಮುಂದಾಗಿದೆ.
ಹೀಗಾಗಿಯೇ ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ), ಎಲ್ ಆ್ಯಂಡ್ ಟಿ ಕಂಪನಿಗೆ ತೆರಿಗೆ ವಂಚಕರ ಮೇಲೆ ಕಣ್ಣಿಟ್ಟು ಮಾಹಿತಿ ವಿಶ್ಲೇಷಿಸಿ ನೀಡುವ ಜವಾಬ್ದಾರಿ ಹೊರಿಸಿದೆ.
ಪತ್ತೆ ಹೇಗೆ?: ಈ ಪ್ರಕಾರ, ಕಂಪನಿಯು ಶಂಕಾಸ್ಪದ ತೆರಿಗೆದಾರರ ‘ಸೆಮ್ಯಾಂಟಿಕ್ ವೆಬ್ ಪೇಜ್’ಗಳನ್ನು ಸಿದ್ಧಪಡಿಸುತ್ತದೆ. ಆಗ ಆ ವ್ಯಕ್ತಿ ನಡೆಸುವ ವಹಿವಾಟಿನ ವಿವರವನ್ನು ನೇರವಾಗಿ ತೆರಿಗೆ ಅಧಿಕಾರಿಗಳು ವೀಕ್ಷಿಸಬಹುದಾಗಿದೆ.
ಈ ಬಗ್ಗೆ ಉದಾಹರಣೆ ನೀಡಿದ ಎಲ್ ಆ್ಯಂಡ್ ಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಜಲೋನಾ, ‘ನಾವು ಓರ್ವ ಶಂಕಾಸ್ಪದ ವ್ಯಕ್ತಿಯ ವೆಬ್‌ಪೇಜ್ ಸಿದ್ಧಪಡಿಸುತ್ತೇವೆ. ಒಂದು ವೇಳೆ ಈತನ ಪತ್ನಿಯು ಯಾವುದೋ ವಿದೇಶ ಪ್ರವಾಸಕ್ಕೆ ಹೋಗಿ ಫೋಟೋ ತೆಗೆಸಿಕೊಂಡರೂ, ಆ ಫೋಟೋ ನಮ್ಮ ಸಾಫ್ಟವೇರ್‌ನಲ್ಲಿ ಶೇರ್ ಆಗುತ್ತದೆ. ಇಷ್ಟೊಂದು ಆಧುನಿಕ ರೀತಿಯಲ್ಲಿ ಆ ವ್ಯಕ್ತಿಯ ಚಲನವಲನಗಳು, ವಹಿವಾಟಿನ ಮೇಲೆ ನಿಗಾ ಇಡಬಹುದಾಗಿದೆ. ಈ ತಂತ್ರಾಂಶ ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.
