65 ವರ್ಷದ ನಾರಾಯಣ ರಾಣೆ ಮೂಲತಃ ಶಿವಸೇನೆ ಪಕ್ಷದವರಾಗಿದ್ದು, 1999ರಲ್ಲಿ ಮುಖ್ಯಮಂತ್ರಿಯೂ ಆಗಿದ್ದರು. ಆದರೆ, ಶಿವಸೇನೆಯಲ್ಲಿ ಉದ್ಧವ್ ಠಾಕ್ರೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ ಎಂದು ಆಪಾದಿಸಿ ಬಂಡಾಯವೆದ್ದಿದ್ದರು. ಈ ಹಿನ್ನೆಲೆಯಲ್ಲಿ ಆಗಿನ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆಯವರು ರಾಣೆಯರನ್ನು ಪಕ್ಷದಿಂದ ಉಚ್ಛಾಟಿಸಿದ್ದರು.

ನವದೆಹಲಿ(ಅ. 06): ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ ರಾಣೆ ಸ್ಥಾಪಿಸಿರುವ ಹೊಸ ಪಕ್ಷವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆಯಂತೆ. ಹಾಗಂತ ಸ್ವತಃ ರಾಣೆಯವರೇ ಹೇಳಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಾರಾಯಣ ರಾಣೆಯವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಿದ್ದರೆನ್ನಲಾಗಿದೆ. ತಮ್ಮ ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷವು ಎನ್'ಡಿಎ ಮೈತ್ರಿಕೂಟಕ್ಕೆ ಬೆಂಬಲ ಕೊಡಲಿದ್ದು, ರೈತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಅಭಿವೃದ್ಧಿಗೆ ಕೆಲಸ ಮಾಡುತ್ತದೆ ಎಂದು ನಾರಾಯಣ ರಾಣೆ ತಿಳಿಸಿದ್ದಾರೆ.

65 ವರ್ಷದ ನಾರಾಯಣ ರಾಣೆ ಮೂಲತಃ ಶಿವಸೇನೆ ಪಕ್ಷದವರಾಗಿದ್ದು, 1999ರಲ್ಲಿ ಮುಖ್ಯಮಂತ್ರಿಯೂ ಆಗಿದ್ದರು. ಆದರೆ, ಶಿವಸೇನೆಯಲ್ಲಿ ಉದ್ಧವ್ ಠಾಕ್ರೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ ಎಂದು ಆಪಾದಿಸಿ ಬಂಡಾಯವೆದ್ದಿದ್ದರು. ಈ ಹಿನ್ನೆಲೆಯಲ್ಲಿ ಆಗಿನ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆಯವರು ರಾಣೆಯರನ್ನು ಪಕ್ಷದಿಂದ ಉಚ್ಛಾಟಿಸಿದ್ದರು.

ಆ ಬಳಿಕ ನಾರಾಯಣ ರಾಣೆ 2005ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಮುಂದಿನ ಕಾಂಗ್ರೆಸ್ ಸರಕಾರದಲ್ಲಿ ರಾಣೆ ಕಂದಾಯ ಸಚಿವರಾದರು. ಸಿಎಂ ಸ್ಥಾನ ಕೊಡುವ ಭರವಸೆ ನೀಡಿ ಪಕ್ಷಕ್ಕೆ ಕರೆತಂದಿದ್ದ ಕಾಂಗ್ರೆಸ್ ತನ್ನ ಮಾತು ಉಳಿಸಿಕೊಳ್ಳಲಿಲ್ಲ. ತನಗೆ ಪಕ್ಷದಲ್ಲಿ ಬೆಲೆ ಇಲ್ಲದಂತಾಗಿದೆ ಎಂದು ನಾರಾಯಣ ರಾಣೆ ಆಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷವನ್ನು ಸಂಸ್ಥಾಪಿಸಿದ್ದಾರೆ.

ನಾರಾಯಣ ರಾಣೆ ಮಹಾರಾಷ್ಟ್ರದ ಆರೇಳು ಜಿಲ್ಲೆಗಳಿರುವ ಕೊಂಕಣ ಪ್ರದೇಶಗಳಲ್ಲಿ ಸಾಕಷ್ಟು ಬೆಂಬಲ ಹೊಂದಿದ್ದಾರೆ. ಮಹಾರಾಷ್ಟ್ರದ ಕರಾವಳಿ ಭಾಗಗಳಲ್ಲಿ ರಾಣೆಯವರಿಗೆ ಸಾಕಷ್ಟು ವರ್ಚಸ್ಸು ಇದೆ. ಈ ಹಿನ್ನೆಲೆಯಲ್ಲಿ ರಾಣೆಯವರ ಹೊಸ ಪಕ್ಷ ಸ್ಥಾಪನೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಹಿನ್ನಡೆಯಾಗಬಹುದು ಎಂಬ ಅಭಿಪ್ರಾಯವಿದೆ.