ಉಗ್ರರೂ ಸೇರಿದಂತೆ ಸಮಾಜಘಾತುಕ ಶಕ್ತಿಗಳಿಂದ ಜೀವ ಭಯ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯನ್ನು ಕೇಂದ್ರ ಗೃಹ ಸಚಿವಾಲಯ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿ ಆದೇಶ ಹೊರಡಿಸಿದೆ.
ನವದೆಹಲಿ: ಉಗ್ರರೂ ಸೇರಿದಂತೆ ಸಮಾಜಘಾತುಕ ಶಕ್ತಿಗಳಿಂದ ಜೀವ ಭಯ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯನ್ನು ಕೇಂದ್ರ ಗೃಹ ಸಚಿವಾಲಯ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿ ಆದೇಶ ಹೊರಡಿಸಿದೆ. ಅಲ್ಲದೆ ಪ್ರಧಾನಿ ಭದ್ರತೆ ನಿಯಮಗಳ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ ಇನ್ನು ಮುಂದೆ ಪ್ರಧಾನಿ ಭದ್ರತೆಯ ಉಸ್ತುವಾರಿ ಹೊತ್ತಿರುವ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ), ಸಮ್ಮತಿಸದ ಹೊರತೂ, ರಾಜ್ಯಗಳಿಗೆ ಭೇಟಿ ನೀಡಿದ ವೇಳೆ ಸಚಿವರು, ಅಧಿಕಾರಿಗಳು ಕೂಡಾ ಮೋದಿ ಬಳಿ ಸುಳಿಯುವಂತಿಲ್ಲ.
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕೆಲ ನಕ್ಸಲ್ ಬೆಂಬಲಿಗರ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ನಕ್ಸಲರು ಸಂಚು ನಡೆಸಿದ್ದ ವಿಚಾರ ಬೆಳಕಿಗೆ ಬಂದಿತ್ತು. 2 ದಶಕಗಳ ಹಿಂದೆ ರಾಜೀವ್‌ಗಾಂಧಿ ಹತ್ಯೆ ಮಾಡಿದ ಮಾದರಿಯಲ್ಲೇ ಮೋದಿ ಹತ್ಯೆಗೆ ಸಂಚು ರೂಪಿಸಿದ್ದು ಕಂಡುಬಂದಿತ್ತು. ಜೊತೆಗೆ ಇತ್ತೀಚೆಗೆ ಮೋದಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ವೇಳೆ ಅಭಿಮಾನಿಯೊಬ್ಬ 6 ಸುತ್ತಿನ ಭದ್ರತೆಯ ಕೋಟೆಯನ್ನೂ ದಾಳಿ ಮೋದಿ ಅವರ ಕಾಲಿಗೆ ನಮಸ್ಕರಿಸುವಲ್ಲಿ ಯಶಸ್ವಿಯಾಗಿದ್ದ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ಸಿಂಗ್ ಅವರು ಇತ್ತೀಚೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಗುಪ್ತಚರ ಬ್ಯೂರೋದ ಮುಖ್ಯಸ್ಥ ರಾಜೀವ್ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದರು.
ಅದರ ಬೆನ್ನಲ್ಲೇ, ಇದೀಗ ಪ್ರಧಾನಿ ಮೋದಿ ಇದೀಗ ಹಿಂದೆಂದಿಗಿಂತಲೂ ಹೆಚ್ಚು ದಾಳಿಯ ಬೆದರಿಕೆ ಎದುರಿಸುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಗೂ ಮುನ್ನ ದಾಳಿಗೊಳಗಾಗಬಹುದಾದ ಅತ್ಯಂತ ಮಹತ್ವದ ಗುರಿ ಪ್ರಧಾನಿ ಮೋದಿ ಎಂದು ಹೇಳಿರುವ ಕೇಂದ್ರ ಗೃಹ ಸಚಿವಾಲಯ ಭದ್ರತೆ ಕುರಿತು ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದೆ.
ಏನು ಹೊಸ ಸೂಚಿ?: ಪ್ರಧಾನಿ ಮೋದಿ ರಾಜ್ಯಗಳಿಗೆ ಭೇಟಿ ನೀಡಿದ ವೇಳೆ ಅವರ ಸಮೀಪಕ್ಕೆ ಯಾರೂ ಬರುವಂತಿಲ್ಲ. ಈ ನಿಯಮ ಸಚಿವರು ಮತ್ತು ಅಧಿಕಾರಿಗಳಿಗೂ ಅನ್ವಯ. ಒಂದು ವೇಳೆ ಎಸ್‌ಪಿಜಿ ಅನುಮತಿ ನೀಡಿದರೆ ಮಾತ್ರವೇ ಸಚಿವರು ಮತ್ತು ಅಧಿಕಾರಿಗಳು ಪ್ರಧಾನಿ ಬಳಿಗೆ ತೆರಳಬಹುದಾಗಿದೆ. ಅಗತ್ಯಬಿದ್ದರೆ ಯಾವುದೇ ಸಂದರ್ಭದಲ್ಲಿ ಸಚಿವರು ಮತ್ತು ಅಧಿಕಾರಿಗಳನ್ನೂ ತಪಾಸಣೆಗೆ ಗುರಿಪಡಿಸಬೇಕು ಎಂದು ಎಸ್‌ಪಿಜಿ ಸಿಬ್ಬಂದಿಗೆ ಸೂಚಿಸಲಾಗಿದೆ.
ರೋಡ್ ಶೋ ಬೇಡ: ದಾಳಿಯ ಬೆದರಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆದಷ್ಟೂರೋಡ್‌ಶೋಗಳಿಂದ ಹಿಂದೆ ಸರಿಯುವಂತೆ ಈಗಾಗಲೇ ಎಸ್‌ಪಿಜಿ ಅಧಿಕಾರಿಗಳು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಇಂಥ ಶೋಗಳಿಗೆ ಭದ್ರತೆ ವಹಿಸುವುದು ತೀರಾ ಕಷ್ಟಕರ ಎನ್ನುವ ಕಾರಣಕ್ಕೆ 2019ರ ಲೋಕಸಭಾ ಚುನಾವಣೆ ವೇಳೆ ಆದಷ್ಟುರಾರಯಲಿಗಳಿಗೆ ಒತ್ತು ನೀಡುವಂತೆಯೂ ಮೋದಿಗೆ ಸಲಹೆ ನೀಡಲಾಗಿದೆ.
ಯಾರಿಂದ ಭೀತಿ?: ಪ್ರಧಾನಿ ಮೋದಿ ವಿರುದ್ಧ ಪಾಕಿಸ್ತಾನದ ಮೂಲದ ಹಲವು ಉಗ್ರ ಸಂಘಟನೆಗಳು ದಾಳಿಗೆ ಹೊಂಚು ಹಾಕುತ್ತಿವೆ. ಇದರ ಜೊತೆಗೆ ದೇಶೀಯವಾಗಿ ನಕ್ಸಲರು ಮತ್ತು ಕೇರಳ ಮೂಲದ ಪಾಪ್ಯುಲರ್‌ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರಿಂದ ಪ್ರಧಾನಿ ಮೋದಿ ದಾಳಿ ನಡೆವ ಸಾಧ್ಯತೆ ಇದೆ ಎಂಬ ಅನುಮಾನ ಭದ್ರತಾ ಪಡೆಗಳದ್ದು. ಹೀಗಾಗಿ ಈ ಸಂಘಟನೆಗಳ ಮೇಲೆ ಭದ್ರತಾ ಸಂಸ್ಥೆಗಳು ಹೆಚ್ಚಿನ ನಿಗಾ ವಹಿಸಿವೆ.
ಪ್ರಧಾನಿ ಭದ್ರತೆ ಹೇಗಿರುತ್ತದೆ?
ಭಾರತದ ಪ್ರಧಾನಿಯ ಪೂರ್ಣ ರಕ್ಷಣೆ ಹೊಣೆ ಎಸ್‌ಪಿಜಿ ಸಿಬ್ಬಂದಿಯದ್ದು. ಇವರು ವಿಶೇಷ ರೀತಿಯಲ್ಲಿ ತರಬೇತುಗೊಂಡಿರುತ್ತಾರೆ. ಎಸ್‌ಪಿಜಿಯಲ್ಲಿನ 6000 ಯೋಧರ ಪೈಕಿ ಆಯ್ದ ತಂಡವನ್ನು ಪ್ರಧಾನಿ ಭದ್ರತೆಗೆ ನಿಯೋಜಿಸಲಾಗುತ್ತದೆ. ಪ್ರಧಾನಿಯದ್ದು ಝಡ್ ಪ್ಲಸ್ ಭದ್ರತೆ. ಝಡ್ಲ್ ಪ್ಲಸ್ ಮಾದರಿಯಲ್ಲಿ ಒಬ್ಬ ವ್ಯಕ್ತಿಗೆ ಯಾವುದೇ ಸಮಯದಲ್ಲಿ 36 ಜನರಿಂದ ಭದ್ರತೆ ಒದಗಿಸಲಾಗುತ್ತದೆ. ಇವರೆಲ್ಲಾ ಶಾಪ್‌ರ್ ಶೂಟರ್‌ಗಳಾಗಿರುತ್ತಾರೆ. ಒಂದು ನಿಮಿಷಕ್ಕೆ 850 ಸುತ್ತು ಗುಂಡು ಹಾರಿಸುವ ರೈಫಲ್ ಇವರ ಬಳಿ ಇರುತ್ತದೆ. 500 ಮೀಟರ್ ದೂರದ ವ್ಯಕ್ತಿಯ ಮೇಲೂ ನಿಖರವಾಗಿ ಗುಂಡು ಹಾರಿಸುವ ಸಾಮರ್ಥ್ಯ ಇವರದ್ದಾಗಿರುತ್ತದೆ. ಇವರಿಗೆ ಮಾರ್ಷಲ್ ಆರ್ಟ್ ತರಬೇತಿಯೂ ಇರುತ್ತದೆ. ದಿನದ 24 ಗಂಟೆಯೂ ಇವರು ಪ್ರಧಾನಿಗೆ ಭದ್ರತೆ ನೀಡುತ್ತಾರೆ.
