ನವದೆಹಲಿ[ಜ.28]: ಭಾರತದಲ್ಲಿ ಬಡತನ ಪ್ರಮಾಣ ಅಂದುಕೊಂಡಿದ್ದಕ್ಕಿಂತಲೂ ವೇಗವಾಗಿ ಇಳಿಕೆಯಾಗಿದೆ ಎಂಬ ಗಮನಾರ್ಹ ಸಂಗತಿಯು ಇತ್ತೀಚಿನ ಅಂಕಿ-ಅಂಶಗಳಿಂದ ಗೊತ್ತಾಗಿದೆ.

2011ರಲ್ಲಿ ದಿನಕ್ಕೆ ಕೇವಲ 1.90 ಡಾಲರ್‌ (ಅಂದಾಜು 130 ರು.) ಖರ್ಚು ಮಾಡುವ ಶಕ್ತಿಯುಳ್ಳ 26.8 ಕೋಟಿ ಜನರು ದೇಶದಲ್ಲಿ ಇದ್ದರು. ಈಗ ಇವರ ಪ್ರಮಾಣ 5 ಕೋಟಿ ಇಳಿದಿದೆ ಎಂದು ‘ವರ್ಲ್ಡ್‌ ಡಾಟಾ ಲ್ಯಾಬ್‌’ ಎಂಬ ಚಿಂತಕರ ಚಾವಡಿಯ ಅಂಕಿ-ಸಂಖ್ಯೆಗಳು ಹೇಳಿವೆ.

ಪ್ರತಿ ಕುಟುಂಬದ ತಲಾ ಖರ್ಚುವೆಚ್ಚ, ಬಳಕೆಯ ಆಧಾರದ ಮೇರೆಗೆ ಬಡತನವನ್ನು ಅಳೆಯಲಾಗುತ್ತದೆ.

2011ರ ಅಂಕಿ-ಅಂಶಗಳು ಭಾರತ ಸರ್ಕಾರ ಬಿಡುಗಡೆ ಮಾಡಿದಂಥವಾಗಿದ್ದವು. ಆದರೆ ಈಗ ‘ವಲ್ಡ್‌ರ್‍ ಡಾಟಾ ಲ್ಯಾಬ್‌’ ಪರಿಷ್ಕೃತ ಅಂಕಿಗಳನ್ನು ನೀಡಿದೆ. ಭಾರತ ಸರ್ಕಾರ ಜೂನ್‌ನಲ್ಲಿ ತನ್ನ ಅಧಿಕೃತ ಮಾಹಿತಿ ಒದಗಿಸಲಿದೆ ಎಂದು ಭಾರತ ಸರ್ಕಾರದ ಮುಖ್ಯ ಅಂಕಿ-ಅಂಶ ತಜ್ಞ ಪ್ರವೀಣ್‌ ಶ್ರೀವಾಸ್ತವ ಹೇಳಿದ್ದಾರೆ.

ಸರ್ಕಾರವು ಜಾರಿಗೊಳಿಸಿರುವ ನೇರ ನಗದು ವರ್ಗಾವಣೆಯಂತಹ ಸವಲತ್ತುಗಳು ಬಡತನವನ್ನು ಇಳಿಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ತಜ್ಞರು ಹೇಳಿದ್ದಾರೆ.

ಮಾನದಂಡ ಏನು?

ದಿನಕ್ಕೆ 1.90 ಡಾಲರ್‌ವರೆಗೆ ಮಾತ್ರ ಖರ್ಚು ಮಾಡುವ ಸಾಮರ್ಥ್ಯ ಹೊಂದಿದ ವ್ಯಕ್ತಿಯನ್ನು ಬಡವ ಎಂದು ಪರಿಗಣಿಸಲಾಗಿದೆ. ಪ್ರತಿ ಕುಟುಂಬದ ತಲಾ ಖರ್ಚುವೆಚ್ಚ, ಬಳಕೆಯ ಆಧಾರದ ಮೇರೆಗೆ ಬಡತನವನ್ನು ಅಳೆಯಲಾಗುತ್ತದೆ.