ಸೇನಾನಿಗಳ ಕುಟುಂಬದಲ್ಲಿ ಹುಟ್ಟಿದ ಬಿಪಿನ್ ರಾವತ್ ಅವರಲ್ಲಿ ಸರಕಾರ ಹೇಳಿಕೊಂಡಂತೆ ಅಂತಹ ವಿಶೇಷತೆಗಳೇನಿವೆ?

ನವದೆಹಲಿ(ಡಿ. 16): ನೂತನ ಸೇನಾ ಮುಖ್ಯಸ್ಥರಾಗಿ ಲೆ| ಜನರಲ್ ಬಿಪಿನ್ ರಾವತ್ ಅವರು ಜ.1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ, ರಾವತ್ ನೇಮಕಾತಿಯಲ್ಲಿ ನಿಯಮ ಪಾಲಿಸಲಾಗಿಲ್ಲ. ಅವರಿಗಿಂತ ಸೇವಾವಧಿಯಲ್ಲಿ ಹಿರಿಕರೆನಿಸಿರುವ ಲೆಫ್ಟಿನೆಂಟ್ ಜನರಲ್'ಗಳಿದ್ದರೂ ಅವರನ್ನು ಬೈಪಾಸ್ ಮಾಡಿ ಬಿಪಿನ್ ರಾವತ್'ರನ್ನು ಪ್ರೊಮೋಟ್ ಮಾಡಿದ್ದು ಯಾಕೆ ಎಂದು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ. ಈಗಿರುವ ಬ್ಯಾಚ್'ನ ಸೇನಾಧಿಕಾರಿಗಳ ಪೈಕಿ ಲೆ| ಜ| ಬಿಪಿನ್ ರಾವತ್ ಅವರು ಹೆಚ್ಚು ಸೂಕ್ತ ಎನ್ನುವ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಸರಕಾರ ಸಮಜಾಯಿಷಿ ನೀಡುತ್ತಿದೆ. ಸೇನಾನಿಗಳ ಕುಟುಂಬದಲ್ಲಿ ಹುಟ್ಟಿದ ಬಿಪಿನ್ ರಾವತ್ ಅವರಲ್ಲಿ ಸರಕಾರ ಹೇಳಿಕೊಂಡಂತೆ ಅಂತಹ ವಿಶೇಷತೆಗಳೇನಿವೆ?

ಬಿಪಿನ್ ರಾವತ್ ಅರ್ಹತೆಗಳು

* 1978ರ ಬ್ಯಾಚ್'ನ ಬಿಪಿನ್ ರಾವತ್ ಅವರಿಗೆ 37 ವರ್ಷಗಳ ಸೇವಾನುಭವವಿದ್ದು, ವಿವಿಧ ಸಮರ ತಂತ್ರಗಳಲ್ಲಿ ನಿಷ್ಣಾತರು.

* ಪಾಕಿಸ್ತಾನದೊಂದಿಗಿನ ಎಲ್'ಓಸಿ ಹಾಗೂ ಚೀನಾದೊಂದಿಗಿನ ಎಲ್'ಎಸಿ ಗಡಿಭಾಗಗಳಲ್ಲಿ ರಾವತ್ ವಿವಿಧ ರೀತಿಯ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

* ಭವಿಷ್ಯದ ಯುದ್ಧ ವಿಧಾನಗಳಲ್ಲಿ ಬಿಪಿನ್ ರಾವತ್ ಅವರಿಗೆ ಹೆಚ್ಚು ಪರಿಣತಿ ಇದೆ.

* ಕಾಂಗೋ ದೇಶದಲ್ಲಿ ಅಂತಾರಾಷ್ಟ್ರೀಯ ಪಡೆಯ ನೇತೃತ್ವ ವಹಿಸಿದ್ದ ಬಿಪಿನ್ ರಾವತ್, ಉಗ್ರಗಾಮಿಗಳ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸಿ ಶಹಬ್ಬಾಸ್ ಎನಿಸಿಕೊಂಡಿದ್ದರು.

* ಯುದ್ಧ ಮಾಡಲು ಬಹಳ ಕಷ್ಟವೆನಿಸುವ ಎತ್ತರದ ಪ್ರದೇಶ(ಹೈ ಆಲ್ಟಿಟ್ಯೂಡ್)ಗಳಲ್ಲಿ ಅವರು ಸಮರಾನುಭವ ಹೊಂದಿದ್ದಾರೆ.

* ಉಗ್ರರ ಒಳನುಸುಳುವಿಕೆ ನಿಗ್ರಹ ಕಾರ್ಯಾಚರಣೆಯಲ್ಲಿ ಎತ್ತಿದ ಕೈ

* ಸೇನೆ ಮತ್ತು ನಾಗರಿಕ ಸಮಾಜದ ನಡುವೆ ಒಂದು ಸಮರ್ಥ ಕೊಂಡಿಯಾಗಿ ಅವರು ಕಾರ್ಯನಿರ್ವಹಿಸುವ ಜಾಣ್ಮೆ ಹೊಂದಿದ್ದಾರೆ.