Asianet Suvarna News Asianet Suvarna News

ಲಾಲ್'ಬಾಗ್'ಗೆ ಸಂಕನ್ ಗಾರ್ಡನ್ ಮುಕುಟ

ಇಡೀ ದಕ್ಷಿಣ ಭಾರತದಲ್ಲಿಯೇ ಇದೇ ಮೊದಲ ಬಾರಿಗೆ ಲಾಲ್‌'ಬಾಗ್‌'ನಲ್ಲಿ ಸಂಕನ್ ಗಾರ್ಡನ್ ನಿರ್ಮಿಸುತ್ತಿದ್ದು, ಸುಮಾರು 75 ಲಕ್ಷ ರು. ವೆಚ್ಚದಲ್ಲಿ ತೋಟಗಾರಿಕೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಿವಿಲ್ ಕಾಮಗಾರಿ ಪೂರ್ಣಗೊಳಿಸಿದ್ದಾರೆ.

New Attraction Soon at lalbagh

ಬೆಂಗಳೂರು(ನ.26): ಸಸ್ಯಕಾಶಿ ಲಾಲ್‌ಬಾಗ್‌'ನ ಮತ್ತೊಂದು ಆಕರ್ಷಣೆಯಾಗಿ ‘ಸಂಕನ್ ಗಾರ್ಡನ್’ ಸೇರ್ಪಡೆಯಾಗುತ್ತಿದೆ. ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಇದು ಮತ್ತಷ್ಟು ಪುಷ್ಪ ಪ್ರಿಯರನ್ನು ಆಕರ್ಷಿಸಲಿದೆ. ಇಡೀ ದಕ್ಷಿಣ ಭಾರತದಲ್ಲಿಯೇ ಇದೇ ಮೊದಲ ಬಾರಿಗೆ ಲಾಲ್‌'ಬಾಗ್‌'ನಲ್ಲಿ ಸಂಕನ್ ಗಾರ್ಡನ್ ನಿರ್ಮಿಸುತ್ತಿದ್ದು, ಸುಮಾರು 75 ಲಕ್ಷ ರು. ವೆಚ್ಚದಲ್ಲಿ ತೋಟಗಾರಿಕೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಿವಿಲ್ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಅಲ್ಲದೆ, ಗಿಡಗಳ ನೆಡುವ ಕಾರ್ಯ ಪ್ರಾರಂಭವಾಗಿದ್ದು, ಮುಂದಿನ ಒಂದು ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಜನವರಿಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಅಕರ್ಷಣೀಯ ಕೇಂದ್ರವಾಗಲಿದೆ.

2016ರ ಸೆಪ್ಟೆಂಬರ್‌'ನಲ್ಲಿ ತೋಟಗಾರಿಕೆ ಇಲಾಖೆಯಿಂದ ಈ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಶೇ. 95ರಷ್ಟು ಮುಗಿದಿದ್ದು, ಸದ್ಯ ಆಕರ್ಷಕ ಗಿಡಗಳನ್ನು ನೆಡುವ ಮೂಲಕ ಸೌಂದರ್ಯ ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ಅಪರೂಪದ 200ಕ್ಕೂ ಹೆಚ್ಚು ಜಲ ಹಾಗೂ 400ಕ್ಕೂ ಹೆಚ್ಚು ಜೌಗು ಸಸ್ಯಗಳನ್ನು ಇಲ್ಲಿ ನೆಡಲಾಗುವುದು. ಅಲ್ಲದೆ, ಹುಲ್ಲಿನ ಹಾಸು, ಕಲ್ಲಿನ ಪೀಠಗಳು, ಕಣ್ಸೆಳೆವ ತಾವರೆಕೊಳ, ಪುಟ್ಟದಾದ ಕಲ್ಯಾಣಿ ಇವುಗಳಿಂದ ಸಂಕನ್ ಉದ್ಯಾನ ಕಂಗೊಳಿಸಲಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೊಟ್ಟೆ ಆಕಾರದ ತಾಣ: ಸುಮಾರು 10 ಅಡಿ ಆಳದಲ್ಲಿ, ಎರಡೂವರೆ ಎಕರೆ ಪ್ರದೇಶದಲ್ಲಿ ಮೊಟ್ಟೆಯಾಕಾರದಲ್ಲಿ ನಿರ್ಮಾಣವಾಗುತ್ತಿರುವ ಸಂಕನ್ ಗಾರ್ಡನ್'ನಲ್ಲಿ ಮಣ್ಣು ಕುಸಿಯದಂತೆ ಎರಡು ರೀತಿಯ ಪಾತ್ ವೇ ರಚಿಸಲಾಗಿದೆ. ಹುಲ್ಲಿನ ಹಾಸು, ಕಲ್ಲಿನ ಪೀಠಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ, ತಾವರೆ ಗಿಡಗಳನ್ನು ನೆಡುವುದಕ್ಕಾಗಿ ಸಣ್ಣದೊಂದು ಕಲ್ಯಾಣಿ ನಿರ್ಮಿಸಲಾಗಿದೆ. ಗಾರ್ಡನ್ ಪಕ್ಕದಲ್ಲಿಯೇ ಜಲಪಾತ ನಿರ್ಮಾಣ ಮಾಡುತ್ತಿದ್ದು, ಸದಾ ಕಾಲ ತುಂತುರು ನೀರು ಬರುವಂತೆ ವ್ಯವಸ್ಥೆ ಮಾಡಲಾಗುವುದು. ಜೌಗು, ಶೀತ ವಲಯದಲ್ಲಿ ಬೆಳೆಯುವ, ಸದಾ ನೀರಿನಲ್ಲಿಯೇ ಉಳಿಯಬಲ್ಲ ವಿವಿಧ ಜಾತಿಯ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.

ಸಂಕನ್ ಗಾಡರ್ನ್‌ಗಾಗಿ ಸಸ್ಯಗಳ ಶೋಧ ನಡೆಸಲಾಗುತ್ತಿದೆ. ಕೆಲವು ಅಪರೂಪದ ಜಲಸಸ್ಯಗಳನ್ನು ಇತರೆ ಉದ್ಯಾನಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದಲೂ ಆಕರ್ಷಕ ಹೂವುಗಳನ್ನು ಬಿಡುವ ಗಿಡಗಳನ್ನು ತರಿಸಿಕೊಳ್ಳಲಾಗುತ್ತಿದೆ. ಅಲ್ಲದೆ, ಖಾಸಗಿ ನರ್ಸರಿಗಳಿಂದ ಕೆಲವು ಸಸ್ಯಗಳನ್ನು ತರುತ್ತೇವೆ. ಹೀಗೆ ಎಲ್ಲೆಲ್ಲಿ ಯಾವ ಯಾವ ಸಸ್ಯಗಳು ದೊರೆಯುತ್ತವೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ, ಸಸಿಗಳನ್ನು ನೆಡುವ ಸಂಬಂಧ ಅಂತಿಮ ನಿರ್ಧಾರ  ಕೈಗೊಳ್ಳಲಾಗುವುದು ಎಂದು ಹೇಳಿದರು. ಬೆಳೆಯುವ ಗಿಡಗಳು: ಜೌಗು ಪ್ರದೇಶದಲ್ಲಿ ಬೆಳೆಯುವ ಬಜೆ, ಅಲೋಶಿಯ, ಜಲ ಸಸ್ಯಗಳಾದ ನಿಂಫಿಯಾ ಆಲ್ಬಾ (ನೀರಿನಲ್ಲಿ ಬೆಳೆಯುವ ಲಿಲಿ ಹೂವಿನ ಒಂದು ಜಾತಿ), ಫೋಟಿಂಗ್ ಹಾರ್ಟ್, ತಾವರೆ, ಯೆಲ್ಲೋ ಪಾಂಡ್ ಲಿಲ್ಲಿ (ನೀರಿನ ಮೇಲೆ ತೇಲುವ ಹಳದಿ ಹೂ) ಹಾಗೂ ಟೈಫಾ ಹುಲ್ಲನ್ನು ಬಳಸಲಾಗುತ್ತಿದೆ.

ವರದಿ: ರಮೇಶ್ ಬನ್ನಿಕುಪ್ಪೆ ಬೆಂಗಳೂರು - ಕನ್ನಡಪ್ರಭ

Follow Us:
Download App:
  • android
  • ios