ಬೆಂಗಳೂರು [ಜು.08] :  ರಾಜೀನಾಮೆ ಸಲ್ಲಿಸಿರುವ 13 ಶಾಸಕರೂ ಒಟ್ಟಾಗಿ ದ್ದೇವೆ. ನಮ್ಮ ಪೈಕಿ ಯಾರೂ ರಾಜೀನಾಮೆ ಹಿಂಪಡೆಯುವುದಿಲ್ಲ ಮತ್ತು ಮಂಗಳವಾರದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗುವುದೂ ಇಲ್ಲ ಎಂದು ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ. ಅತೃಪ್ತ ಶಾಸಕರೊಂದಿಗೆ ಮುಂಬೈನಲ್ಲಿರುವ ಸೋಮಶೇಖರ್ ಭಾನುವಾರ ಸುದ್ದಿಗೋಷ್ಠಿ ನಡೆಸಿದ್ದು, ಒಟ್ಟು 13  ಮಂದಿ ಶಾಸಕರು ವಿಧಾನಸಭೆ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿ, ರಾಜ್ಯಪಾಲರಿಗೂ ಮಾಹಿತಿ ನೀಡಿದ್ದೇವೆ. 

ಪ್ರಸ್ತುತ ಹತ್ತು ಮಂದಿ ಶಾಸಕರು ಇಲ್ಲೇ ಒಟ್ಟಿಗೆ ಇದ್ದೇವೆ. ಸೋಮವಾರ ರಾಮಲಿಂಗಾರೆಡ್ಡಿ ಹಾಗೂ ಮುನಿರತ್ನ, ಆನಂದ್ ಸಿಂಗ್ ಅವರೂ ನಮ್ಮನ್ನು ಕೂಡಿಕೊಳ್ಳಲಿದ್ದಾರೆ. ಹದಿಮೂರು ಮಂದಿ ಶಾಸಕರ ನಿರ್ಧಾರ ಅಚಲವಾಗಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ಸಿಎಲ್‌ಪಿಗೆ ಹಾಜರಾಗಲ್ಲ: ಹಲವು ಶಾಸಕರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದು, ಬೆಂಗಳೂರಿಗೆ ಬಂದು ರಾಜೀನಾಮೆ ಹಿಂಪಡೆಯಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಯಾವುದೇ ಕಾರಣಕ್ಕೂ ನಾವು ಹದಿಮೂರು ಮಂದಿಯಲ್ಲಿ ಒಬ್ಬರೂ ರಾಜೀನಾಮೆ ಹಿಂಪಡೆಯುವುದಿಲ್ಲ. ನಾವು ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಕರೆದಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಹಾಜರಾಗುವ ಅನಿವಾರ್ಯ ತೆಯೂ ಸೃಷ್ಟಿಯಾಗುವುದಿಲ್ಲ ಎಂದು ಹೇಳಿದರು.

ಸಿಎಂ ಬದಲು ಮಾಡಿ ಎಂದಿಲ್ಲ: 13 ಶಾಸಕರು ಒಟ್ಟಾಗಿದ್ದೇವೆ. ಮುಖ್ಯಮಂತ್ರಿ ಬದಲು ಮಾಡಿ ಎಂದು ನಾವು ಬೇಡಿಕೆ ಇಟ್ಟಿಲ್ಲ. ಇಂತಹವರನ್ನು ಮುಖ್ಯಮಂತ್ರಿ ಮಾಡಿ ಎಂದೂ ನಾವು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಸಿದ್ದರಾಮಯ್ಯ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿದರೆ ಕೆಲ ಶಾಸಕರು ವಾಪಸಾಗಲಿದ್ದಾರೆ ಎಂಬ ಸುದ್ದಿಯನ್ನು ಅವರು ಅಲ್ಲಗಳೆದರು.