ಕಠ್ಮಂಡು[ಜ.06]: ಮಕ್ಕಳು ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬುವುದನ್ನು ಖಚಿತಪಡಿಸಿಕೊಳ್ಳಲು ನೇಪಾಳ ಸರ್ಕಾರ ಕಾನೂನೊಂದನ್ನು ಜಾರಿಗೊಳಿಸುತ್ತಿದೆ. ಇದರ ಅನ್ವಯ ಮಕ್ಕಳು ತಮ್ಮ ಆದಾಯದ ಒಂದು ಭಾಗವನ್ನು ಹೆತ್ತವರ ಬ್ಯಾಂಕ್ ಖಾತೆಗೆ ಜಮೆ ಮಾಡುವುದು ಕಡ್ಡಾಯ, ಈ ಮಾಹಿತಿ ನೇಪಾಳ ಸರ್ಕಾರ ಹಿರಿಯ ಸಚಿವರು ಖಚಿತಪಡಿಸಿದ್ದಾರೆ.

ನೇಪಾಳ ಸರ್ಕಾರದ ವಕ್ತಾರ ಹಾಗೂ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಗೋಕುಲ್ ಪ್ರಸಾದ್ ಬಾಸ್ಕೋಟಾ ಈ ಕುರಿತಗಿ ಮಾಹಿತಿ ನೀಡುತ್ತಾ 'ಮಂತ್ರಿ ಮಂಡಲ ಸಭೆಯಲ್ಲಿ ಈ ಪ್ರಸ್ತಾವನೆಯೊಂದಿಗೆ ಹಿರಿಯ ನಾಗರಿಕ ಕಾಯ್ದೆ-2006' ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಜಾರಿಗೊಳಿಸಲು ತೀರ್ಮಾನಿಸಿದ್ದೇವೆ. ಈ ಮೂಲಕ ಹಿರಿಯ ನಾಗರಿಕರ ಸುರಕ್ಷತೆ ಕಾಪಾಡುವ ಉದ್ದೇಶ ನಮ್ಮದಾಗಿದೆ ' ಎಂದಿದ್ದಾರೆ.

ಮಸೂದೆ ಮಂಡನೆ ಹಿಂದಿನ ಕಾರಣವನ್ನು ತಿಳಿಸಿರುವ ಸಚಿವರು 'ಆಸ್ತಿ ಅಂತಸ್ತು ಹೊಂದಿರುವ ವ್ಯಕ್ತಿಗಳೂ ತಮ್ಮ ತಂದೆ ತಾಯಿಯನ್ನು ಕಡೆಗಣಿಸುತ್ತಿರುವುದು, ಕೀಳಾಗಿ ನೋಡುತ್ತಿರುವುದು ಮತ್ತು ಅವರೊಂದಿಗೆ ಕೆಟ್ಟದಾಗಿ ವ್ಯವಹರಿಸುವ ಪ್ರಕರಣಗಳು ಕಂಡು ಬಂದಿವೆ. ಹೀಗಾಗಿ ಇಂತಹ ವ್ಯಕ್ತಿಗಳನ್ನು ಹತ್ತಿಕ್ಕಲು ಈ ಮಹತ್ವದ ಕಾನೂನು ಜಾರಿಗೊಳಿಸುತ್ತಿದ್ದೇವೆ. ಹಿರಿಯರ ಜೀವನವನ್ನು ಸುರಕ್ಷಿತವಾಗೊಳಿಸುವುದು ಕೂಡಾ ದೇಶಕ್ಕೆ ಘನತೆ ತಂದು ಕೊಡುತ್ತದೆ' ಎಂದಿದ್ದಾರೆ.