"ಕಾಂಗ್ರೆಸ್ ನಾಯಕರ ಬಣ್ಣ ರಾಜ್ಯಸಭಾ ಚುನಾವಣೆಯಲ್ಲಿ ಬಯಲಾಯಿತು. ಈ ಚುನಾವಣೆಯಲ್ಲಿ ಬೇರೆ ಪಕ್ಷದವರಿಂದ ಅಡ್ಡ ಮತದಾನ ಮಾಡಿಸಿಕೊಂಡು ಗೆಲ್ಲಿಸಿದರು. ಅಡ್ಡಮತದಾನಕ್ಕೆ ಇರುವ ಬೆಲೆ ನಿಷ್ಠೆ, ಪ್ರಾಮಾಣಿಕತೆಗೆ ಇಲ್ಲವಾಯಿತು. ನಾವೆಲ್ಲಾ ಮೆರಿಟ್'ನಿಂದ ಬಂದವರು. ಆದರೂ ನಮ್ಮನ್ನು ಮೂಲೆಗುಂಪು ಮಾಡಲಾಯಿತು. ಕಾಂಗ್ರೆಸ್ ನಾಯಕರಿಗೆ ಈಗ ವರ್ಕರ್ಸ್ ಬೇಕಿಲ್ಲ, ಕೇವಲ ಡೀಲರ್ಸ್'ಗಳ ಅಗತ್ಯವಿದೆ," ಎಂದು ನೆ.ಲ.ನರೇಂದ್ರಬಾಬು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು(ಸೆ. 27): ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2013ರ ಚುನಾವಣೆಯಲ್ಲಿ ತಾನು ಸೋಲಲು ಕಾಂಗ್ರೆಸ್ ಪಕ್ಷದ ಪ್ರಮುಖರೇ ಕಾರಣ ಎಂದವರು ಆರೋಪಿಸಿದ್ದಾರೆ. ಅದರಲ್ಲೂ, ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ನರೇಂದ್ರ ಬಾಬು ನೇರ ವಾಗ್ದಾಳಿ ಮಾಡಿದ್ದಾರೆ. "ನನ್ನನ್ನು ಸೋಲಿಸಲು ದಿನೇಶ್ ಗುಂಡೂರಾವ್ ಷಡ್ಯಂತ್ರ ರೂಪಿಸಿದ್ದರು. ಮುಂದಿನ ಚುನಾವಣೆಯಲ್ಲೂ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ. ದಿನೇಶ್ ಗುಂಡೂರಾವ್ ನನ್ನ ಕ್ಷೇತ್ರದಲ್ಲಿ ಹಣ ಹಂಚಿಸುತ್ತಿದ್ದಾರೆ. ಇಂತಹ ಪಿತೂರಿಗಳಿಂದಾಗಿ ನಾನು ಅನಿವಾರ್ಯವಾಗಿ ರಾಜೀನಾಮೆ ಕೊಡುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು" ಎಂದು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಮಾಜಿ ಶಾಸಕರಾದ ಅವರು ಆಪಾದಿಸಿದ್ದಾರೆ. ಎಲ್ಲಾ ವಿಚಾರದಲ್ಲೂ ಮೂಗು ತೂರಿಸಬೇಡಿ ಎಂದೂ ದಿನೇಶ್ ಗುಂಡೂರಾವ್ ಅವರಿಗೆ ಮಾಜಿ ಶಾಸಕರು ಕಿವಿ ಮಾತು ಹೇಳಿದ್ದಾರೆ.
ವರ್ಕರ್ಸ್ ಅಲ್ಲ, ಡೀಲರ್ಸ್ ಬೇಕು:
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ ಎಂದು ಮಾಜಿ ಕಾಂಗ್ರೆಸ್ ಮುಖಂಡ ನೆ.ಲ.ನರೇಂದ್ರ ಬಾಬು ಈ ವೇಳೆ ವಿಷಾದಿಸಿದ್ದಾರೆ. "ಕಾಂಗ್ರೆಸ್ ನಾಯಕರ ಬಣ್ಣ ರಾಜ್ಯಸಭಾ ಚುನಾವಣೆಯಲ್ಲಿ ಬಯಲಾಯಿತು. ಈ ಚುನಾವಣೆಯಲ್ಲಿ ಬೇರೆ ಪಕ್ಷದವರಿಂದ ಅಡ್ಡ ಮತದಾನ ಮಾಡಿಸಿಕೊಂಡು ಗೆಲ್ಲಿಸಿದರು. ಅಡ್ಡಮತದಾನಕ್ಕೆ ಇರುವ ಬೆಲೆ ನಿಷ್ಠೆ, ಪ್ರಾಮಾಣಿಕತೆಗೆ ಇಲ್ಲವಾಯಿತು. ನಾವೆಲ್ಲಾ ಮೆರಿಟ್'ನಿಂದ ಬಂದವರು. ಆದರೂ ನಮ್ಮನ್ನು ಮೂಲೆಗುಂಪು ಮಾಡಲಾಯಿತು. ಕಾಂಗ್ರೆಸ್ ನಾಯಕರಿಗೆ ಈಗ ವರ್ಕರ್ಸ್ ಬೇಕಿಲ್ಲ, ಕೇವಲ ಡೀಲರ್ಸ್'ಗಳ ಅಗತ್ಯವಿದೆ," ಎಂದು ನೆ.ಲ.ನರೇಂದ್ರಬಾಬು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ಹೋಗ್ತಾರಾ..?
ಕಾಂಗ್ರೆಸ್'ನಲ್ಲಿ ತನ್ನನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಯತ್ನ ನಡೆಯಿತಾದರೂ ತಾನು ಸುಮ್ಮನೆ ಕೂತು ತುಕ್ಕು ಹಿಡಿಯುವ ವ್ಯಕ್ತಿಯಲ್ಲ ಎಂದು ನೆ.ಲ. ಹೇಳಿದ್ದಾರೆ. ಮುಂದಿನ ರಾಜಕೀಯ ನಡೆಯ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಮ್ಮ ಸಂಪರ್ಕದಲ್ಲಿರುವುದನ್ನು ತಿಳಿಸಿದ್ದಾರೆ. ಆದರೆ, ನವೆಂಬರ್ 1ರಂದು ತನ್ನ ಮುಂದಿನ ರಾಜಕೀಯ ಹಾದಿಯನ್ನು ಪ್ರಕಟಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ.
