ವೈದ್ಯಕೀಯ ಕೋರ್ಸ್’ಗಳಿಗೆ ಪ್ರವೇಶ ಪಡೆಯಲು ಬರೆಯುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾಮಾನ್ಯ ಪ್ರಶ್ನೆ ಪತ್ರಿಕೆ ಇರಬೇಕೆಂದು ಸುಪ್ರೀಂಕೋರ್ಟ್ ಇಂದು ಸಿಬಿಎಸ್’ಇ ಮಂಡಳಿಗೆ ಸೂಚಿಸಿದೆ. ಸಿಬಿಎಸ್’ಇ 8 ಪ್ರಾದೇಶಿಕ ಭಾಷೆಗಳಲ್ಲಿ ಬೇರೆ ಬೇರೆ ರೀತಿಯ ಪ್ರಶ್ನೆ ಪತ್ರಿಕೆ ತೆಗೆದಿರೋದಕ್ಕೆ ಸುಪ್ರೀಂಕೋರ್ಟ್ ಸಿಬಿಎಸ್'ಇಗೆ ಗುದ್ದು ನೀಡಿದೆ .
ನವದೆಹಲಿ (ಆ.10):ವೈದ್ಯಕೀಯ ಕೋರ್ಸ್’ಗಳಿಗೆ ಪ್ರವೇಶ ಪಡೆಯಲು ಬರೆಯುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾಮಾನ್ಯ ಪ್ರಶ್ನೆ ಪತ್ರಿಕೆ ಇರಬೇಕೆಂದು ಸುಪ್ರೀಂಕೋರ್ಟ್ ಇಂದು ಸಿಬಿಎಸ್’ಇ ಮಂಡಳಿಗೆ ಸೂಚಿಸಿದೆ. ಸಿಬಿಎಸ್’ಇ 8 ಪ್ರಾದೇಶಿಕ ಭಾಷೆಗಳಲ್ಲಿ ಬೇರೆ ಬೇರೆ ರೀತಿಯ ಪ್ರಶ್ನೆ ಪತ್ರಿಕೆ ತೆಗೆದಿರೋದಕ್ಕೆ ಸುಪ್ರೀಂಕೋರ್ಟ್ ಸಿಬಿಎಸ್'ಇಗೆ ಗುದ್ದು ನೀಡಿದೆ.
ನೀಟ್ ಪರೀಕ್ಷೆಯಲ್ಲಿ ಇಂಗ್ಲೀಷ್ ಮತ್ತು ಹಿಂದಿಗೆ ಹೋಲಿಸಿದರೆ 8 ಪ್ರಾದೇಶಿಕ ಭಾಷೆಗಳ ಪ್ರಶ್ನೆಪತ್ರಿಕೆಗಳು ಬಹಳ ಕ್ಲಿಷ್ಟವಾಗಿರುತ್ತವೆ ಎಂದು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಹಿಂದಿನ ವಿಚಾರಣೆಯಲ್ಲಿ ವಿದ್ಯಾರ್ಥಿಗಳ ಆರೋಪವನ್ನು ತಳ್ಳಿ ಹಾಕಿದ ಸಿಬಿಎಸ್’ಇ ಆಯಾ ರಾಜ್ಯಗಳು, ಭಾಷೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆಯಲ್ಲಿ ವ್ಯತ್ಯಾಸವಿರುತ್ತದೆ ಎಂದು ಹಿಂದಿನ ವಿಚಾರಣೆಯಲ್ಲಿ ಸಿಬಿಎಸ್’ಇ ವಾದಿಸಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನೀಟ್’ನಲ್ಲಿ ಹಿಂದಿ, ಇಂಗ್ಲೀಷ್ ಜೊತೆ ಏಕರೂಪದ ಪ್ರಶ್ನೆ ಪತ್ರಿಕೆ ಇರಬೇಕೆಂದು ಸಿಬಿಎಸ್’ಇಗೆ ಸೂಚಿಸಿದೆ.
ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆದು ತೊಂದರೆ ಅನುಭವಿಸಿದ ವಿದ್ಯಾರ್ಥಿಗಳ ಮಾಹಿತಿಯನ್ನು ಸುಪ್ರೀಂಕೋರ್ಟ್ ಇಂದು ಕೋರಿದೆ. ಸಿಬಿಎಸ್’ಇ ಮಂಡಳಿ ಇಂದು ಪರೀಕ್ಷಾ ಅನುಬಂಧವನ್ನು ( annexure) ನ್ಯಾಯಾಲಯಕ್ಕೆ ಸಲ್ಲಿಸಿದ್ದು, 2017 ರ ನೀಟ್ ಪರೀಕ್ಷೆಯಲ್ಲಿ 1,00,152 ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆದಿದ್ದರು. ಅದರಲ್ಲಿ 30,817 ಮಂದಿ ಮಾತ್ರ ಪಾಸಾಗಿದ್ದರು. ಅದರಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ 720 ಅಂಕಗಳಿಗೆ 600 ಅಂಕಗಳನ್ನು ಪಡೆದಿದ್ದ ಎಂದು ವರದಿ ಸಲ್ಲಿಸಿದೆ.
