ನೀಟ್ ಅಭ್ಯರ್ಥಿಗಳ ಮಾಹಿತಿ ಸೋರಿಕೆಸಿಬಿಎಸ್‌ಇ ಗೆ ಪತ್ರ ಬರೆದ ರಾಹುಲ್ ಗಾಂಧಿಸೂಕ್ತ ತನಿಖೆಗೆ ಒತ್ತಾಯಿಸಿದ ರಾಹುಲ್ ಗಾಂಧಿಸಿಬಿಎಸ್‌ಇ ಅದ್ಯಕ್ಷೆ ಅನಿತಾ ಕರ್ವಾಲ್ ಅವರಿಗೆ ಪತ್ರಅಭ್ಯರ್ಥಿಗಳ ಮಾಹಿತಿ ಆನ್‌ಲೈನ್‌ನಲ್ಲಿ ಮಾರಾಟ?

ನವದೆಹಲಿ(ಜು.24): ನೀಟ್ ಪರೀಕ್ಷೆ ಹಲವು ಅಭ್ಯರ್ಥಿಗಳ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಅರೋಪ ಕೇಳಿ ಬಂದ ಬೆನ್ನಲ್ಲೇ ರಾಹುಲ್ ಗಾಂಧಿ ಇಂದು ಸಿಬಿಎಸ್‌ಇಗೆ ಪತ್ರ ಬರೆದಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಇಂದು ಸಿಬಿಎಸ್‌ಇ ಅದ್ಯಕ್ಷೆ ಅನಿತಾ ಕರ್ವಾಲ್ ಅವರಿಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, ಭವಿಷ್ಯದಲ್ಲಿ ಇಂತಹ ಸೋರಿಕೆ ತಡೆಗಟ್ಟಲು ಹೆಚ್ಚುವರಿ ಭದ್ರತೆ ನೀಡಬೇಕೆಂದು ಕೇಳಿಕೊಂಡಿದ್ದಾರೆ.

ನೀಟ್ ಪರೀಕ್ಷೆ ಬರೆದ ಸುಮಾರು ಎರಡು ಲಕ್ಷ ಅಭ್ಯರ್ಥಿಗಳ ಮಾಹಿತಿ ಸೋರಿಕೆಯಾಗಿದ್ದು, ಅದನ್ನು ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಇತ್ತೀಚಿಗೆ ಮಾಧ್ಯಮಗಳು ವರದಿ ಮಾಡಿರುವುದನ್ನು ರಾಹುಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಭ್ಯರ್ಥಿಗಳ ಹೆಸರು, ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಸೇರಿದಂತೆ ಹಲವು ವೈಯಕ್ತಿಕ ಮಾಹಿತಿ ಸೋರಿಕೆಯಾಗಿದ್ದು, ಅದನ್ನು ಕೆಲವು ಆನ್‌ಲೈನ್ ಪೋರ್ಟಲ್‌ನಲ್ಲಿ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

ದೇಶಾದ್ಯಂತ ಈ ಪ್ರಮಾಣದಲ್ಲಿ ಅಭ್ಯರ್ಥಿಗಳ ಮಾಹಿತಿ ಸೋರಿಕೆಯಾಗುತ್ತಿರುವುದು ತಮಗೆ ಆಘಾತ ತಂದಿದೆ ಎಂದಿರುವ ರಾಹುಲ್, ಈ ಕುರಿತು ಕೂಡಲೇ ತನಿಖೆಗೆ ಆದೇಶಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.