ದುರಂತವೆಂದರೆ ಕೆಆರ್​'ಎಸ್​ ಪಕ್ಕದಲ್ಲೇ ಇರುವ ಜನ, ಹೊಂಡಗಳ ನೀರನ್ನು ಸೋಸಿ ಕುಡಿಯುವ ಸ್ಥಿತಿಯಲ್ಲಿದ್ದಾರೆ.

ಬೆಂಗಳೂರು(ಫೆ.13): ಇದು ಬೆಂಗಳೂರಿನ ಜನ ಬೆಚ್ಚಿಬೀಳಬೇಕಾದ ವಿಚಾರ. ಇಂಥದ್ದೊಂದು ಅಪಾಯ ಆಕಸ್ಮಿಕವೇನಲ್ಲ. ಅನಿರೀಕ್ಷಿತವೂ ಅಲ್ಲ. ನೀರಿನ ಬರದಿಂದ ಕಣ್ಣೀರು ಹಾಕಬೇಕಾದ ದಿನಗಳು ಇನ್ನುಗಳು ಸದ್ಯದಲ್ಲಿಯೇ ಎದುರಾಗೋದಂತು ಗ್ಯಾರಂಟಿ.

ಇಂಥಾದ್ದೊಂದು ಭೀಕರತೆ ಸೃಷ್ಟಿಯಾಗುತ್ತೆ ಅನ್ನೋ ಸುಳಿವು ಕಾವೇರಿ ಗಲಾಟೆ ವೇಳೆಯಲ್ಲೇ ಸಿಕ್ಕಿತ್ತು. ಇದರ ಪರಿಣಾಮ ಬರೀ ಬೆಂಗಳೂರನ್ನಷ್ಟೇ ಕಾಡದೇ ಮೈಸೂರು, ರಾಮನಗರ, ಚಾಮರಾಜನಗರ, ಹಾಸನಕ್ಕೂ ಅಪಾಯದ ಕರೆಗಂಟೆ ಬಾರಿಸುತ್ತಿದೆ.

ಸುಪ್ರೀಂ ಕೋರ್ಟ್ ತೀರ್ಪನ್ನು ಚಾಚೂತಪ್ಪದೇ ಪಾಲಿಸಿದ ಪರಿಣಾಮವಾಗಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್'ಎಸ್ ಆಣೆಕಟ್ಟು ಒಣಗಿದ ಹೊಲಗದ್ದೆಯಂತೆ ಕಾಣುತ್ತಿದೆ.

ಕೆಆರ್'ಎಸ್ ಡ್ಯಾಂನಲ್ಲಿ ನೀರು ಎಷ್ಟಿದೆ..?

ಡ್ಯಾಂ ಎತ್ತರ : 124.80 ಅಡಿ
ಈಗ ಇರುವುದು : 78.94 ಅಡಿ
ಸಾಮರ್ಥ್ಯ : 49.45 ಟಿಎಂಸಿ
ಈಗ ಇರುವುದು : 10 ಟಿಎಂಸಿ
ಡೆಡ್​ ಸ್ಟೋರೇಜ್ : 4.7 ಟಿಎಂಸಿ
ಬಳಕೆಗೆ ಇರುವುದು : ಕೇವಲ 5.6 ಟಿಎಂಸಿ

ಸದ್ಯದ ಸವಾಲು:

ಒಂದು ದಿನಕ್ಕೆ ಕನಿಷ್ಠ 800 ಕ್ಯುಸೆಕ್​'ಗೂ ಹೆಚ್ಚು ನೀರು ಬೇಕು. ಇಷ್ಟು ನೀರಿನಲ್ಲಿ 3 ತಿಂಗಳು ನಿರ್ವಹಣೆ ಮಾಡುವುದೇ ಸರ್ಕಾರದ ಮುಂದಿರುವ ದೊಡ್ಡ ಸವಾಲು.

ಡೆಡ್ಸ್ಟೋರೇಜ್​ನ್ನೂ ಬಳಸಬೇಕಾದ ಅನಿವಾರ್ಯತೆ..!

15 ದಿನಗಳ ನಂತರ ಡೆಡ್​ ಸ್ಟೋರೇಜ್ ಬಳಕೆ ಅನಿವಾರ್ಯವೆನಿಸಿದೆ. ಅಂಥಾದ್ದೊಂದು ನಿರ್ಣಯವನ್ನೂ ಸರ್ಕಾರ ಈಗಾಗಲೇ ತೆಗೆದುಕೊಂಡು ಆಗಿದೆ.

ದುರಂತವೆಂದರೆ ಕೆಆರ್​'ಎಸ್​ ಪಕ್ಕದಲ್ಲೇ ಇರುವ ಜನ, ಹೊಂಡಗಳ ನೀರನ್ನು ಸೋಸಿ ಕುಡಿಯುವ ಸ್ಥಿತಿಯಲ್ಲಿದ್ದಾರೆ.

ಇದಷ್ಟೇ ಅಲ್ಲದೆ ಹೇಮಾವತಿಯ ಒಡಲೂ ಖಾಲಿಯಾಗಿದೆ.ಗೋರೂರು ಡ್ಯಾಂ ಫೆಬ್ರವರಿಯಲ್ಲೇ ಬರಿದಾಗಿದೆ. ಮಲೆನಾಡಿಗೂ ಆಧಾರವಾಗಿದ್ದ ತುಂಗಭದ್ರಾ ಜಲಾಶಯದಲ್ಲೂ ಈಗ ನೀರುತ್ತಿಲ್ಲ. ಅಲ್ಲೀಗ ಕೇವಲ ಒಣಗಿದ ಬಂಡೆಗಳು ಮಾತ್ರ ಕಾಣಸಿಗುತ್ತಿವೆ. ಇನ್ನು ಕಬಿನಿಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಪ್ರತಿ ವರ್ಷ ಎರಡು ಬೆಳೆಗಳಿಗೆ ನೀರು ಕೊಡುತ್ತಿದ್ದ ಕಬಿನಿಯಲ್ಲಿ ಈ ವರ್ಷ ಒಂದು ಬೆಳೆಗೂ ನೀರು ಪೂರೈಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ವರ್ಷ ಮೈಸೂರು,ಮಂಡ್ಯ, ಚಾಮರಾಜನಗರ, ಮತ್ತು ಬೆಂಗಳೂರು ಜನತೆಗೆ ಕುಡಿಯುವ ನೀರಿನ ಸರಬರಾಜಿಗಿದ್ದ ಒಂದು ಆಶಾಕಿರಣವೂ ದೂರವಾದಂತೆ ಭಾಸವಾಗುತ್ತಿದೆ.

ಅನುಮಾನವೇ ಇಲ್ಲ, ನೀರು ಎನ್ನುವುದು ಎಷ್ಟು ಅಮೂಲ್ಯ ಎನ್ನುವುದರ ಅರ್ಥ ಈಗ ಅರ್ಥವಾಗಲಿದೆ. ಇಷ್ಟು ವರ್ಷಗಳ ಸೋಮಾರಿತನಕ್ಕೆ, ನೀರನ್ನು ವೇಸ್ಟ್ ಮಾಡಿದ್ದಕ್ಕೆ, ಕೆರೆಗಳನ್ನು ನುಂಗಿ ದುಡ್ಡು ತಿಂದಿದ್ದಕ್ಕೆ ನಾವು ತೆರಿಗೆ ಕಟ್ಟಬೇಕಾದ ಸಮಯ ಬಂದಾಗಿದೆ.