ನೀತಿ ಆಯೋಗ, ದೇಶಕ್ಕೆ ತರಲಿದೆ ಯೋಗ: ಪ್ರಧಾನಿ..!

Need To Take Growth To Double Digits: PM Modi
Highlights

ನೀತಿ ಆಯೋಗ, ದೇಶಕ್ಕೆ ತರಲಿದೆ ಯೋಗ

ಆಡಳಿತ ಮಂಡಳಿ ಸಭೆಯಲ್ಲಿ ಪ್ರಧಾನಿ ಘೋಷಣೆ

ಐತಿಹಾಸಿಕ ಬದಲಾವಣೆಗೆ ವೇದಿಕೆ ಸಜ್ಜು

ಬದಲಾವಣೆಗಾಗಿ ವೇದಿಕೆಯ ಸದುಪಯೋಗ

ನವಭಾರತ 2022ರ ದೃಷ್ಟಿಕೋನಕ್ಕೆ ವೇದಿಕೆ ಸಿದ್ದ

ನವದೆಹಲಿ(ಜೂ.17): ನೀತಿ ಆಯೋಗದ ಆಡಳಿತ ಮಂಡಳಿಯ ಮೂಲಕ  ದೇಶದಲ್ಲಿ ಐತಿಹಾಸಿಕ ಬದಲಾವಣೆಯನ್ನು ತರಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ ನಾಲ್ಕನೇ ಸಭೆಯನ್ನುದ್ದೇಶಿ ಮಾತನಾಡಿದ ಪ್ರಧಾನಿ, ನೀತಿ ಆಯೋಗದ ಆಡಳಿತ ಮಂಡಳಿ ಎಂಬುದು ಬದಲಾವಣೆಗಾಗಿ ಇರುವ ಒಂದು ಉತ್ತಮ ವೇದಿಕೆ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ನೆರೆ ಪೀಡಿತ ರಾಜ್ಯಗಳಿಗೆ ಪ್ರಧಾನ್ಯತೆ ನೀಡಿ ಮಾತನಾಡಿದ ಮೋದಿ, ಕೇಂದ್ರ ಸರ್ಕಾರ ಈ ರಾಜ್ಯಗಳಿಗೆ ಎಲ್ಲಾ ರೀತಿಯ ನೆರವನ್ನು ನೀಡಲಿದೆ ಎಂದು ಭರವಸೆ ನೀಡಿದರು. ಈಶಾನ್ಯ ರಾಜ್ಯಗಳಾದ ತ್ರಿಪುರಾ, ಅಸ್ಸಾಂ, ಮಿಜೋರಂ ಮತ್ತು ಮಣಿಪುರಗಳು ಕಳೆದ ಕೆಲ ದಿನಗಳಿಂದ ಪ್ರವಾಹಕ್ಕೆ ತೀವ್ರ ತೊಂದರೆಗೊಳಗಾಗಿವೆ.

ಇದಕ್ಕೂ ಮುನ್ನ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮತ್ತು ಇತರ ನಿಯೋಗಗಳ ಅಧಿಕಾರಿಗಳನ್ನು ಸ್ವಾಗತಿಸಿದ ಪ್ರಧಾನಿ, ಟೀಮ್ ಇಂಡಿಯಾ ಎಂಬ ಪರಿಕಲ್ಪನೆ ಮೂಲಕ ಸಹಕಾರಿ ಮತ್ತು ಸ್ಪರ್ಧಾತ್ಮಕ ಮಟ್ಟ ಬೆಳೆಸಬೇಕಾಗುತ್ತದೆ. ಇದಕ್ಕೆ ಸರಕು ಮತ್ತು ಸೇವಾ ತೆರಿಗೆಯ ಸುಗಮ ಜಾರಿ ಒಂದು ಉದಾಹರಣೆ ಎಂದು ಪ್ರಧಾನಿ ಹೇಳಿದರು.  

ನವಭಾರತ 2022ರ ದೃಷ್ಟಿಕೋನಕ್ಕೆ ವೇದಿಕೆ ಸಿದ್ದವಾಗಿದ್ದು, ಈ ನಿಟ್ಟಿನಲ್ಲಿ ರೈತರ ಆದಾಯ ಹೆಚ್ಚಳ, ಮಹಾತ್ವಾಕಾಂಕ್ಷಿ ಜಿಲ್ಲೆಗಳ ಬೆಳವಣಿಗೆ, ಆಯುಷ್ಮಾನ್ ಭಾರತ್, ಮಿಷನ್ ಇಂದ್ರಧನುಷ್, ಪೌಷ್ಟಿಕಾಂಶ ಅಭಿಯಾನ ಮತ್ತು ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನಾಚರಣೆಗಳು ಸೇರಿವೆ ಎಂದು ಪ್ರಧಾನಿ ಹೇಳಿದರು. ಸಭೆಯಲ್ಲಿ ಕೇಂದ್ರ ಸಚಿವರುಗಳು, ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಗಳು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.

loader