ಮತಯಂತ್ರ ಬೇಡ, ಮತಪತ್ರ ಬೇಕು ಎಂಬ ಆಗ್ರಹಗಳ ನಡುವೆಯೇ ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಎಷ್ಟು ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ವಿವಿಪ್ಯಾಟ್ (ವೋಟರ್ -ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್) ಅಗತ್ಯವಿದೆ ಎಂಬ ಲೆಕ್ಕಾಚಾರವನ್ನು ಚುನಾವಣಾ ಆಯೋಗ ಆರಂಭಿಸಿದೆ.
ಬೆಂಗಳೂರು (ಡಿ.25): ಮತಯಂತ್ರ ಬೇಡ, ಮತಪತ್ರ ಬೇಕು ಎಂಬ ಆಗ್ರಹಗಳ ನಡುವೆಯೇ ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಎಷ್ಟು ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ವಿವಿಪ್ಯಾಟ್ (ವೋಟರ್ -ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್) ಅಗತ್ಯವಿದೆ ಎಂಬ ಲೆಕ್ಕಾಚಾರವನ್ನು ಚುನಾವಣಾ ಆಯೋಗ ಆರಂಭಿಸಿದೆ.
ಸದ್ಯಕ್ಕೆ 56700 ಮತಗಟ್ಟೆಗಳಿದ್ದು, ಇವುಗಳಿಗೆ ತಲಾ ಒಂದು ಇವಿಎಂ ಮತ್ತು ವಿವಿಪ್ಯಾಟ್ ಬೇಕಾಗುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಶೇ. 30 ರಿಂದ 40 ರಷ್ಟು ಹೆಚ್ಚುವರಿ ಇವಿಎಂ ಅಂದರೆ ಸುಮಾರು 75 ಸಾವಿರ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ಸಂಗ್ರಹಿಸಿಟ್ಟುಕೊಳ್ಳಲು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಉದ್ದೇಶಿಸಿದೆ. ಹೆಚ್ಚುವರಿ ಇವಿಎಂಗಳನ್ನು ಚುನಾವಣಾ ತರಬೇತಿ, ತಾಂತ್ರಿಕ ತೊಂದರೆ ಕಾಣಿಸಿಕೊಂಡ ಸಂದರ್ಭದಲ್ಲಿ ಬದಲಿಯಾಗಿ ಬಳಸಲು ಹಾಗೂ ಮತದಾನ ಪೂರ್ವ ಎಲ್ಲ ಪಕ್ಷಗಳ ಏಜೆಂಟರ ಮುಂದೆ ನಡೆಯಲಿರುವ ಅಣಕು ಮತದಾನಕ್ಕೆ ಬಳಸಲು ಉದ್ದೇಶಿಸಲಾಗಿದೆ.
‘ಕನ್ನಡಪ್ರಭ’ಕ್ಕೆ ಈ ವಿಷಯ ತಿಳಿಸಿದ ರಾಜ್ಯ ಜಂಟಿ ಮುಖ್ಯ ಚುನಾವಣಾಧಿಕಾರಿ ಕೆ.ಎನ್. ರಮೇಶ್, ಈಗಾಗಲೇ ಮತದಾನ ಪಟ್ಟಿಯ ಕರಡು ಪ್ರತಿ ಪ್ರಕಟಿಸಲಾಗಿದೆ. ಹೊಸದಾಗಿ ಸೇರ್ಪಡೆ, ಅಥವಾ ಮರಣ ಇತ್ಯಾದಿ ಕಾರಣದಿಂದ ಮತದಾರರ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗಬಹುದು. ಪರಿಷ್ಕೃತ ಅಂತಿಮ ಪಟ್ಟಿ ಪ್ರಕಟವಾದ ನಂತರವೇ ಮತಗಟ್ಟೆಗಳ ಸಂಖ್ಯೆಯಲ್ಲಿ ಬದಲಾವಣೆ ಆಗಬಹುದು. ಹೀಗಿದ್ದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಹೊಂದಲಾಗುವುದು ಎಂದರು. ಸಿಬ್ಬಂದಿಗೆ ೩ ಹಂತದ ತರಬೇತಿ: ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತ ಮತ್ತು ಗೊಂದಲರಹಿತವಾಗಿ ನಡೆಯಲು ಸಿಬ್ಬಂದಿಗೆ ಮೂರು ಹಂತದ ತರಬೇತಿ ನೀಡಲಾಗುವುದು. ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ತರಬೇತಿ ನೀಡಲಾಗುವುದು.
ವಿಶ್ವಾಸಾರ್ಹ ಇವಿಎಂ: ವಿದ್ಯುನ್ಮಾನ ಮತ ಯಂತ್ರಗಳು ವಿಶ್ವಾಸಾರ್ಹ ಅಲ್ಲ, ಅದರಲ್ಲಿ ಮತಗಳನ್ನು ತಿದ್ದಬಹುದು ಎಂಬ ಮಾತುಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಕೆ.ಎನ್. ರಮೇಶ್, ಇವಿಎಂಗಳ ಬಳಕೆ ಅತ್ಯಂತ ಪಾರದರ್ಶಕವಾಗಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ತಾಂತ್ರಿಕ ಸಿಬ್ಬಂದಿ ಪರಿಶೀಲನೆ ನಡೆಸುವುದಲ್ಲದೇ, ರಾಜಕೀಯ ಪಕ್ಷಗಳ ಮುಖಂಡರಿಗೂ ಪರಿಶೀಲಿಸಲು ಅವಕಾಶ ಇರುತ್ತದೆ. ನಂತರದಲ್ಲಿ ಮತಪತ್ರವನ್ನು ಇವಿಎಂ ಮೇಲೆ ಅಂಟಿಸಿ ಸೀಲ್ ಮಾಡಲಾಗುತ್ತದೆ. ಇದಾದ ನಂತರ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಅಣಕು ಮತದಾನ ಮಾಡಿ, ಎಲ್ಲರ ಸಹಿ ಪಡೆದು ಪ್ರಮಾಣ ಪತ್ರ ನೀಡಲಾಗುತ್ತದೆ. ಮತದಾನ ಮುಗಿದ ಮೇಲೆ ಇವಿಎಂಗಳನ್ನು ಭದ್ರತಾ ಕೊಠಡಿಯಲ್ಲಿ ಇಟ್ಟು, ಅಭ್ಯರ್ಥಿಗಳು ಇಲ್ಲವೇ ಅವರ ಏಜೆಂಟರ ಸಮ್ಮುಖದಲ್ಲಿ ಕೊಠಡಿಗೆ ಬೀಗ ಹಾಕಿ ಸೀಲು ಹಾಕಲಾಗುವುದು. ಹೀಗಾಗಿ ಇವಿಎಂ ಕುರಿತು ಅನುಮಾನ ಪಡಲು ಯಾವುದೇ ಆಧಾರವಿಲ್ಲ. ರಾಜ್ಯ ಹೈಕೋರ್ಟ್ ಹಾಗೂ ತಮಿಳುನಾಡಿನ ಹೈಕೋರ್ಟ್ ಸಹ ಪ್ರತ್ಯೇಕ ಪ್ರಕರಣಗಳಲ್ಲಿ ಇವಿಎಂ ನಂಬಿಕೆ ಅರ್ಹ, ತಿರುಚುವ ಸಾಧ್ಯತೆಯೇ ಇಲ್ಲ ಎಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.
ವರದಿ: ಎಂ ಆರ್ ಚಂದ್ರಮೌಳಿ
