ನವದೆಹಲಿ  : ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಇದೀಗ ಭಾರತೀಯ ಸೇನೆ ಸರಿಯಾದ ಪ್ರತಿಕ್ರಿಯೆ ನೀಡಿದೆ. ಭಾರತೀಯ ವಾಯು ಪಡೆ ಅಗತ್ಯ ಕ್ರಮವನ್ನೇ ಕೈಗೊಂಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. 

"

ಮುಂಜಾನೆ 3.30ರ ಸುಮಾರಿಗೆ ಭಾರತೀಯ ವಾಯುಪಡೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಕ್ಯಾಂಪ್ ಗಳನ್ನು ನಾಶ ಮಾಡಿದೆ . ಫೆ.14ರಂದು 44 ಭಾರತೀಯ ಯೋಧರು ಜೈಶ್ ಇ ದಾಳಿಯಲ್ಲಿ ವೀರಮರಣವನ್ನಪ್ಪಿರುವುದಕ್ಕೆ ಪ್ರತ್ಯುತ್ತರ ನೀಡಿದೆ ಎಂದಿದ್ದಾರೆ. 

1ಕ್ಕೆ 20, ವಾರ್ ಆದ್ರೆ ಪಾಕ್‌ಗೆ ಕುತ್ತು: ಇಲ್ಲಿದೆ ಭಾರತದ ತಾಕತ್ತು!

ಇದು ನಮ್ಮ ಅತ್ಯಂತ ಖಡಕ್ ಸಂದೇಶ. ಈ ರೀತಿಯ ಕೆಲಸವಾಗುವ ಅಗತ್ಯವೊಂದು ಎದುರಾಗಿತ್ತು. ಅದನ್ನು ವಾಯುಪಡೆ ಮಾಡಿದೆ.  ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಸಂಪೂರ್ಣ  ಸ್ವಾತಂತ್ರ್ಯ ನೀಡಿದರು. ಇದರಿಂದ ಸಂಪೂರ್ಣ ಭಾರತ  ನಮ್ಮ ಸೇನೆಯ ಬೆನ್ನಿಗೆ ಬೆಂಬಲವಾಗಿ ನಿಂತಿದೆ ಎಂದು ಸಚಿವ ಜಾವಡೇಕರ್ ಹೇಳಿದರು. 

ಮೂಲಗಳ ಪ್ರಕಾರ ಬೆಳಗ್ಗೆ 3.30ರ ಸುಮಾರಿಗೆ 12 ಮಿರೇಜ್ 2000 ಯುದ್ಧ ವಿಮಾನಗಳು ಉಗ್ರರ ಕ್ಯಾಂಪ್ ಮೇಲೆ 1000 ಕೆಜಿ ಬಾಂಬ್ ದಾಳಿ ನಡೆಸಿದ್ದು ಇದರಿಂದ 200 ರಿಂದ 300 ಉಗ್ರರು ಹತರಾಗಿರಬಹುದೆಂದು ಅಂದಾಜಿಸಲಾಗಿದೆ.