ಈ ಅವಧಿಯಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಸುಮಾರು 11,367.34 ಕೋಟಿ ರೂಪಾಯಿ ಆದಾಯ ಗಳಿಸಿವೆ.
ನವದೆಹಲಿ(ಜ.24): ದೇಶದ ವಿವಿಧ ರಾಜಕೀಯ ಪಕ್ಷಗಳಿಗೆ 2004-05ರಿಂದ 2014-15ರ ನಡುವೆ ಸುಮಾರು 7,833 ಕೋಟಿ ರೂಪಾಯಿ ದೇಣಿಗೆ ಅಪರಿಚಿತ ಮೂಲಗಳಿಂದ ಬಂದಿದೆ ಎಂದು ವರದಿಯೊಂದು ತಿಳಿಸಿದೆ.
11 ವರ್ಷಗಳಲ್ಲಿ ಪಕ್ಷಗಳ ಆದಾಯದಲ್ಲಿ ಶೇ. 69ರಷ್ಟು ಪ್ರಮಾಣದ ಆದಾಯ ಅಪರಿಚಿತ ಮೂಲದ್ದಾಗಿದೆ. ಅದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅತ್ಯಧಿಕ ಪಾಲನ್ನು ಹೊಂದಿವೆ ಎಂದು ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್) ವರದಿಯಲ್ಲಿ ತಿಳಿಸಲಾಗಿದೆ.
ಈ ಅವಧಿಯಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಸುಮಾರು 11,367.34 ಕೋಟಿ ರೂಪಾಯಿ ಆದಾಯ ಗಳಿಸಿವೆ. ಅದರಲ್ಲಿ ಪರಿಚಿತರಿಂದ ಪಡೆದ ದೇಣಿಗೆಯ ಮೊತ್ತ ಕೇವಲ 1,835.63 ಕೋಟಿ ರೂಪಾಯಿಯಾಗಿದೆ. ಅದು ಒಟ್ಟು ಆದಾಯದ ಶೇ. 16ರಷ್ಟಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇನ್ನುಳಿದಂತೆ ಶೇ. 15ರಷ್ಟು ಅಂದರೆ, ಸುಮಾರು 1,698.73 ಕೋಟಿ ಆದಾಯ ಆಸ್ತಿ ಮಾರಾಟ, ಸದಸ್ಯತ್ವ ಶುಲ್ಕ, ಬ್ಯಾಂಕ್ ಬಡ್ಡಿ ಇತ್ಯಾದಿ ಮೂಲಗಳಿಂದ ಬಂದಿರುತ್ತದೆ.
11 ವರ್ಷಗಳಲ್ಲಿ ಕಾಂಗ್ರೆಸ್'ಗೆ ಬಂದ ದೇಣಿಗೆಯಲ್ಲಿ ರೂ. 3,323.39 ಕೋಟಿ ಅಪರಿಚಿತ ಮೂಲದ್ದಾಗಿದ್ದು, ಇದು ಒಟ್ಟು ಆದಾಯದ ಶೇ. 83ರಷ್ಟಾಗಿದೆ. ಬಿಜೆಪಿಗೆ ಬಂದ ಒಟ್ಟು ದೇಣಿಗೆಯಲ್ಲಿ 2,125.91 ಕೋಟಿ ಅಪರಿಚಿತ ಮೂಲದ್ದಾಗಿದ್ದು, ಇದು ಶೇ. 65ರಷ್ಟಾಗಿದೆ. ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷಕ್ಕೆ 766.27 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ.
ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಪೈಕಿ, ಬಿಎಸ್ಪಿಯೊಂದೇ ರೂ. 20,000ಕ್ಕಿಂತ ಅಧಿಕ ಮೊತ್ತದ ದೇಣಿಗೆ ಸ್ವೀಕರಿಸಿಲ್ಲ ಎಂದು ಸತತವಾಗಿ ಘೋಷಿಸಿಕೊಂಡು ಬಂದಿರುವ ಪಕ್ಷವಾಗಿದೆ. ಹೀಗಾಗಿ ಆ ಪಕ್ಷದ ಶೇ. 100ರಷ್ಟು ದೇಣಿಗೆಯೂ ಅಪರಿಚಿತ ಮೂಲದಿಂದ ಬಂದಿರುವುದಾಗಿ ಪರಿಗಣಿಸಲಾಗಿದೆ. ಆರು ರಾಷ್ಟ್ರೀಯ ಪಕ್ಷಗಳು 20,000ಕ್ಕಿಂತ ಅಧಿಕ ಮೊತ್ತದ ದೇಣಿಗೆಯ ಮುಖಾಂತರ ಒಟ್ಟು ರೂ. 1,405.19 ಕೋಟಿ ದೇಣಿಗೆ ಸ್ವೀಕರಿಸಿವೆ. ಅದರಲ್ಲಿ ಬಿಜೆಪಿ ಮುಂಚೂಣಿಯಲ್ಲಿದ್ದು, ರೂ. 20,000ಕ್ಕಿಂತ ಅಧಿಕ ಮೊತ್ತದ ದೇಣಿಗೆಯ ಮುಖಾಂತರ ಅದು ರೂ. 917.86 ಕೋಟಿ ದೇಣಿಗೆ ಸ್ವೀಕರಿಸಿತ್ತು ಎಂದು ಎಡಿಆರ್ ವರದಿಯಲ್ಲಿ ತಿಳಿದು ಬಂದಿದೆ.
