Asianet Suvarna News Asianet Suvarna News

ಮುಂದಿನ ವರ್ಷ ರಾಜ್ಯಸಭೆಯಲ್ಲೂ ಬಿಜೆಪಿಯದ್ದೇ ಹವಾ!

ರಾಜ್ಯಸಭೆ ಬಹುಮತ ಸನಿಹಕ್ಕೆ ಎನ್‌ಡಿಎ| ಮ್ಯಾಜಿಕ್‌ ಸಂಖ್ಯೆಯಿಂದ ಕೇವಲ 6 ಸ್ಥಾನಗಳ ಅಂತರ| ಬಿಜೆಡಿ, ವೈಎಸ್ಸಾರ್‌ ಬೆಂಬಲದಿಂದ ಹಾದಿ ಸುಗಮ| ಮುಂದಿನ ವರ್ಷ ಮೇಲ್ಮನೆಯಲ್ಲಿ ಸರ್ಕಾರಕ್ಕೆ ಸ್ಪಷ್ಟಬಹುಮತ

NDA closer to Rajya Sabha majority but BJP core agenda may have to wait
Author
Bangalore, First Published Jul 2, 2019, 9:25 AM IST

ನವದೆಹಲಿ[ಜು.02]: ಲೋಕಸಭೆ ಚುನಾವಣೆಯಲ್ಲಿ ಸತತ ಎರಡು ಬಾರಿ ಐತಿಹಾಸಿಕ ದಿಗ್ವಿಜಯ ಸಾಧಿಸಿದರೂ ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಎದುರಿಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸದ್ಯದಲ್ಲೇ ಮ್ಯಾಜಿಕ್‌ ಸಂಖ್ಯೆಯ ಸಮೀಪಕ್ಕೆ ಬರಲಿದೆ. ಮುಂದಿನ ವರ್ಷ ಸ್ಪಷ್ಟಬಹುಮತವನ್ನು ಗಳಿಸಿಕೊಳ್ಳುವುದು ನಿಶ್ಚಿತವಾಗಿದೆ. ಇದರಿಂದಾಗಿ ಹಲವು ಮಹತ್ವದ ಮಸೂದೆಗಳನ್ನು ಲೋಕಸಭೆಯಲ್ಲಿ ಸುಲಭವಾಗಿ ಅಂಗೀಕರಿಸಿದರೂ, ರಾಜ್ಯಸಭೆಯ ಅನುಮೋದನೆ ಪಡಲು ಪ್ರಯಾಸ ಪಡುತ್ತಿರುವ ಕೇಂದ್ರ ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ತೆಲುಗುದೇಶಂನ 4 ಹಾಗೂ ರಾಷ್ಟ್ರೀಯ ಲೋಕದಳದ ಒಬ್ಬ ಸದಸ್ಯರು ಕೆಲ ದಿನಗಳ ಹಿಂದೆ ಬಿಜೆಪಿ ಸೇರಿದ್ದಾರೆ. ಇದರಿಂದಾಗಿ ಬಿಜೆಪಿಯ ಒಟ್ಟು ಬಲ ರಾಜ್ಯಸಭೆಯಲ್ಲಿ 76ಕ್ಕೆ ಹೆಚ್ಚಳಗೊಂಡಿದೆ. ಗುಜರಾತಿನ 2 ಸ್ಥಾನಗಳಿಗೆ ಜು.5ಕ್ಕೆ ಚುನಾವಣೆ ನಡೆಯಲಿದೆ. ಅಲ್ಲಿ ಎರಡೂ ಸ್ಥಾನವನ್ನು ಬಿಜೆಪಿ ಗೆಲ್ಲುವುದು ಖಚಿತವಾಗಿದೆ. ಹೀಗಾಗಿ ಬಿಜೆಪಿ ಬಲ 78ಕ್ಕೇರಿಕೆಯಾಗಲಿದೆ. ಇದರಿಂದಾಗಿ ಜು.5ರ ನಂತರ ಮೇಲ್ಮನೆಯಲ್ಲಿ ಎನ್‌ಡಿಎ ಬಲ 115ಕ್ಕೆ ಹೆಚ್ಚಳಗೊಳ್ಳಲಿದೆ.

ರಾಜ್ಯಸಭೆಯ ಒಟ್ಟು ಬಲ 245. ಬಹುಮತಕ್ಕೆ 123 ಸ್ಥಾನಗಳು ಬೇಕು. ಆದರೆ ಸದ್ಯ ರಾಜ್ಯಸಭೆಯಲ್ಲಿ 235 ಸದಸ್ಯರು ಇದ್ದಾರೆ. ಜು.5ರಂದು ಚುನಾವಣೆ ನಡೆದ ಬಳಿಕ ಸದಸ್ಯರ ಸಂಖ್ಯೆ 241ಕ್ಕೇರಿಕೆಯಾಗಲಿದೆ. ಆಗ ಬಹುಮತಕ್ಕೆ 121 ಸ್ಥಾನಗಳು ಬೇಕಾಗುತ್ತವೆ. ಜು.5ರ ನಂತರ ಎನ್‌ಡಿಎ ಬಲ 115ಕ್ಕೇರಿಕೆಯಾಗಲಿದ್ದು, ಕೇವಲ 6 ಸ್ಥಾನಗಳಿಂದ ಬಹುಮತ ತಪ್ಪುತ್ತದೆ. ಆದರೆ ಬಿಜೆಡಿ 5 ಹಾಗೂ ವೈಎಸ್ಸಾರ್‌ ಕಾಂಗ್ರೆಸ್‌ ಇಬ್ಬರು ರಾಜ್ಯಸಭೆ ಸದಸ್ಯರನ್ನು ಹೊಂದಿರುವುದರಿಂದ, ಆ ಪಕ್ಷಗಳ ಬೆಂಬಲ ಪಡೆದು ಮಸೂದೆಗಳನ್ನು ಅಂಗೀಕರಿಸಲು ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ.

ಮುಂದಿನ ವರ್ಷ ಉತ್ತರಪ್ರದೇಶದ 10 ರಾಜ್ಯಸಭಾ ಸ್ಥಾನಗಳು ತೆರವಾಗಲಿವೆ. 403 ಸದಸ್ಯ ಬಲದ ವಿಧಾನಸಭೆಯಲ್ಲಿ 300 ಶಾಸಕರನ್ನು ಹೊಂದಿರುವ ಬಿಜೆಪಿ, ಸುಲಭವಾಗಿ 9 ಸ್ಥಾನಗಳನ್ನು ಗೆಲ್ಲಲಿದೆ. ಇದರಿಂದಾಗಿ ಎನ್‌ಡಿಎ ಬಲ ರಾಜ್ಯಸಭೆಯಲ್ಲಿ 124ಕ್ಕೇರಿಕೆಯಾಗಲಿದೆ. ಇದು, 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಹುಮತಕ್ಕೆ ಬೇಕಾದ ಸ್ಥಾನಕ್ಕಿಂತ ಒಂದು ಸೀಟು ಹೆಚ್ಚು. ಅಲ್ಲಿಗೆ ರಾಜ್ಯಸಭೆಯ ಬಹುಮತವೆಂಬ ಬಿಜೆಪಿಯ ಕನಸು ನನಸಾಗಲಿದೆ.

Follow Us:
Download App:
  • android
  • ios