ನವದೆಹಲಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ವಿವಿಧ ಪಕ್ಷಗಳೂ ಸಕಲ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಮಹಾ ಘಟಬಂಧನ್ ಮೂಲಕ  ಮೈತ್ರಿಯಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿರುವ ಕಾಂಗ್ರೆಸ್ ಪಾಳಯಕ್ಕೆ ಮತ್ತೊಂದು ಪಕ್ಷ ಸೇರ್ಪಡೆಯಾಗುತ್ತಿದೆ. 

2019ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಸೀಟು  ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್ ಹಾಗೂ NCP ಸಜ್ಜಾಗಿವೆ. 

ಒಟ್ಟು 40 ಲೋಕಸಭಾ ಕ್ಷೇತ್ರಗಳಲ್ಲಿ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸಲು ನಿರ್ಧರಿಸಿದ್ದಾಗಿ NCP ಮುಖಂಡ ಪ್ರಫುಲ್ ಪಟೇಲ್ ಹೇಳಿದ್ದಾರೆ. 

ಈ ಮೈತ್ರಿಯಿಂದ ರಾಜ್ಯದಲ್ಲಿ ಭರ್ಜರಿ ಗೆಲುವು ದೊರೆಯುವುದು ಖಚಿತ ಎನ್ನುವ ಭರವಸೆಯನ್ನು ಮುಖಂಡರು ವ್ಯಕ್ತಪಡಿಸಿದ್ದಾರೆ. ಒಂದೇ ಮನಸ್ಥಿತಿಯ ಪಕ್ಷಗಳು ಒಟ್ಟಾಗಿ ಹೋರಾಡುವುದರಿಂದ  ಗೆಲುವು ಖಚಿತ ಎಂದು ಹೇಳಿದ್ದಾರೆ. 

ಈಗಾಗಲೇ ಕಾಂಗ್ರೆಸ್ ಹಾಗೂ NCP ಯ ಕೇಂದ್ರೀಯ ನಾಯಕರ ನಡುವೆ ಮೈತ್ರಿಯಲ್ಲಿ ಚುನಾವಣೆ ಎದುರಿಸುವ ಚರ್ಚೆಯೂ ಅಂತಿಮವಾಗಿದೆ ಎಂದು ಹೇಳಲಾಗಿದೆ.

ಈ ಹಿಂದೆ ಶರದ್ ಪವಾರ್ ಅವರೂ ಕೂಡ ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆಸಿ, ಒಂದೇ ಮನಸ್ಥಿತಿಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಾಗುವುದು ಎಂದು ಹೆಳಿದ್ದರು. ಅದರಂತೆ ಇದೀಗ ಮಹಾರಾಷ್ಟ್ರದಲ್ಲಿ ಒಂದಾಗಿ ಚುನಾವಣೆ ಎದುರಿಸಲು  ಉಭಯ ಪಕ್ಷಗಳು ಸಜ್ಜಾಗಿವೆ.