ಶ್ರೀನಗರ(ಆ.9): ಪ್ರಧಾನಿ ನರೇಂದ್ರ ಮೋದಿ ಜಗತ್ತು ಕಂಡ ಅತ್ಯಂತ ಭಯಾನಕ ಉಗ್ರ ಎಂದು ನ್ಯಾಷನಲ್‌ ಕಾನ್ಫ‌ರೆನ್ಸ್‌ ಶಾಸಕ ಜಾವೇದ್‌ ರಾಣಾ ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಿ ಮೋದಿ ಒಬ್ಬ ದೊಡ್ಡ ಉಗ್ರ ಮತ್ತು ಮಾನವೀಯತೆಯ ಹಂತಕ ಎಂದು ರಾಣಾ ಟೀಕಿಸಿದ್ದಾರೆ.

ಅತೀ ದೊಡ್ಡ ಭಯೋತ್ಪಾದಕ ಮತ್ತು ಮಾನವೀಯತೆಯ ಹಂತಕ ನಮ್ಮ ದೇಶದ ಪ್ರಧಾನಿಯಾಗಿರುವುದು ದುರದೃಷ್ಟಕರ ಎಂದಿರುವ ರಾಣಾ, ಗುಜರಾತ್‌ನಲ್ಲಿ ಲಕ್ಷಾಂತರ ಮಂದಿಯನ್ನು ಕೊಂದ ಕೊಲೆಗಾರ ನಮ್ಮನ್ನು ಆಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

ಕಳೆದ ಸೋಮವಾರ ಪೂಂಚ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಣಾ ಮಾತನಾಡಿದ ವಿಡಿಯೋ ಬಹಿರಂಗವಾಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ರಾಣಾ ಈ ಹಿಂದೆಯೂ ಇದೇ ರೀತಿಯ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. 

ಕೇಂದ್ರ ಸರ್ಕಾರ ಸಂವಿಧಾನದ 35ಎ ಮತ್ತು 370ನೇ ವಿಧಿಯನ್ನು ಬದಲಾಯಿಸಿದಲ್ಲಿ ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವುದಿಲ್ಲ ಎಂದು ರಾಣಾ ಇತ್ತೀಚಿಗೆ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.