ಚಿಕ್ಕಮಗಳೂರು (ಸೆ.13): ಸುಮಾರು 15 ವರ್ಷಗಳ ಹಿಂದೆ ಆದಿವಾಸಿ ಜನರ ಹಕ್ಕೋತ್ತಾಯಕ್ಕಾಗಿ ಮಲೆನಾಡಿನಲ್ಲಿ ಬಂದೂಕು ಹಿಡಿದು ಹೋರಾಟಕ್ಕೆ ಇಳಿದು, ರಕ್ತಕ್ರಾಂತಿಯ ಸಮರ ಸಾರಿ, ತನ್ನ ಸಹಚರರ ಪ್ರಾಣ ಬಲಿಕೊಟ್ಟು ಭೂಗತವಾಗಿರುವ ನಕ್ಸಲೀಯರು ಈಗ ತಮ್ಮ ಇರುವಿಕೆಯನ್ನು ಸಾಕ್ಷೀಕರಿಸಲು ಆಯ್ಕೆ ಮಾಡಿಕೊಂಡ ವಿಧಾನ ಬಾಂಬ್‌ಗಳಿಂದ ಸರ್ಕಾರಿ ಕಚೇರಿಗಳನ್ನು ಸಿಡಿಸುವುದು.
ಇದಕ್ಕಾಗಿ ಮಾಸ್ಟರ್ ಪ್ಲಾನ್ ಕೂಡಾ ಸಿದ್ಧಪಡಿಸಲಾಗಿತ್ತು. ಜಿಲ್ಲೆಯ ಶೃಂಗೇರಿ ಹಾಗೂ ಕೊಪ್ಪ ತಾಲೂಕು ಇದಕ್ಕಾಗಿ ಆಯ್ಕೆ ಮಾಡಲಾಗಿತ್ತು. ಸೆಪ್ಟಂಬರ್ ತಿಂಗಳಲ್ಲಿ ಈ ಕೃತ್ಯ ಎಸಗಲು ನಕ್ಸಲೀಯರು ಪ್ಲಾನ್ ಮಾಡಿದ್ದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ನಕ್ಸಲ್ ಮುಖಂಡ ರಮೇಶ್ ಅಲಿಯಾಸ್ ಶಿವಕುಮಾರ್ ಈ ಸಂಗತಿ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ನಕ್ಸಲೀಯರು ಮಲೆನಾಡಿನಲ್ಲಿ ನಡೆಸಿದ ಹೋರಾಟದಲ್ಲಿ ಪ್ರಥಮದಲ್ಲಿ ಸ್ಥಳೀಯರಿಂದ ಸಹಕಾರ ಸಿಗುತ್ತಿತ್ತು. ಈ ಹೋರಾಟದಲ್ಲಿ ಸ್ಥಳೀಯ ಯುವಕರು ಪ್ರಾಣ ಕಳೆದುಕೊಂಡ ಮೇಲೆ ಹೋರಾಟಕ್ಕೆ ಸಿಗುತ್ತಿದ್ದ ಬೆಂಬಲ ಕಡಿಮೆಯಾಯಿತು. ಕಳೆದ ಐದಾರೂ ವರ್ಷಗಳಿಂದ ನಕ್ಸಲೀಯರ ಸಂಖ್ಯೆ ತೀರ ಇಳಿಮುಖವಾಗಿದೆ. ತಮ್ಮ ಇರುವಿಕೆ ದೃಢಪಡಿಸಿಕೊಳ್ಳಲು ಆಗಾಗ ಕರಪತ್ರಗಳನ್ನು ಹಂಚುವ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಕೆಲಸ ನಕ್ಸಲೀಯರು ಮಾಡುತ್ತಿಲ್ಲ, ಕಾರಣ, ಈ ತಂಡದಲ್ಲಿ ಇದೀಗ ಇರುವವರು ಐದಾರೂ ಮಂದಿ ಮಾತ್ರ. ನಕ್ಸಲ್ ಹೆಸರಿನಲ್ಲಿ ಬೇರೆಯವರು ಕರಪತ್ರ ಹಾಕುತ್ತಿದ್ದರೆಂಬುದು ಪೊಲೀಸ್ ಇಲಾಖೆಯ ಲೆಕ್ಕಾಚಾರವಾಗಿತ್ತು.
ರಾಜ್ಯದ ನಕ್ಸಲ್ ತಂಡದಲ್ಲಿ ವಿಕ್ರಂಗೌಡ, ಬಿ.ಜಿ.ಕೃಷ್ಣಮೂರ್ತಿ, ವನಜಾಕ್ಷಿ, ಮುಂಡಗಾರು ಲತಾ, ಸುರೇಶ್ ಅಲಿಯಾಸ್ ಪ್ರದೀಪ್ ಹಾಗೂ ಜಾನ್ ಪ್ರಮುಖರು. ಇವರಲ್ಲಿ ವಿಕ್ರಂಗೌಡ ಮತ್ತು ಬಿ.ಜಿ.ಕೃಷ್ಣಮೂರ್ತಿ ಸದ್ಯ ಕೇರಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರುಗಳು ಮಲೆನಾಡಿನಲ್ಲಿ ತಾವಿದ್ದೇವೆಂದು ಗುರುತಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಬಾಂಬ್ ಹಾಕಲು ಯೋಜಿಸಿದ್ದರು. ಮುಖಂಡ ರಮೇಶ್‌ನನ್ನು ಪೊಲೀಸರು ಬಂಧಿಸಿದ್ದರಿಂದ ಬಾಂಬ್ ಹಾಕುವ ಪ್ಲಾನ್‌ನ್ನು ನಕ್ಸಲೀಯರು ಇದೀಗ ಕೈಬಿಟ್ಟಿದ್ದಾರೆನ್ನಲಾಗುತ್ತಿದೆ.
ಹೊಂಚು ಹಾಕಿ ಕಾದರು:
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ನಕ್ಸಲ್ ಚಟುವಟಿಕೆಯ ನಾಯಕತ್ವ ವಹಿಸಿಕೊಂಡಿರುವ ಕುಪ್ಪುಸ್ವಾಮಿಯನ್ನು ಬಂಧಿಸುವುದು ಪೊಲೀಸ್ ಇಲಾಖೆಯ ಮುಖ್ಯ ಗುರಿಯಾಗಿದೆ. ಕುಪ್ಪುಸ್ವಾಮಿಯನ್ನು ಬಂಧಿಸಿದರೆ ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ನಕ್ಸಲೀಯರ ಪ್ರಾಬಲ್ಯ ಸ್ಥಗಿತಗೊಳ್ಳಲಿದೆ ಎಂಬುದು ಪೊಲೀಸ್ ಇಲಾಖೆಯ ಚಿಂತನೆ. ಕೆಲ ತಿಂಗಳ ಹಿಂದೆ ಕುಪ್ಪುಸ್ವಾಮಿ ಚೆನ್ನೈನಲ್ಲಿ ಪೊಲೀಸರ ಕಣ್ಣಿಗೆ ಬಿದ್ದಿದ್ದು, ಆತನನ್ನು ಬೆನ್ನಟ್ಟಿದಾಗ ಎಸ್ಕೇಪ್ ಆದ ಎಂದು ಹೇಳಲಾಗಿದೆ.
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ರಮೇಶ್ ಪೊಲೀಸರಿಗೆ ಕಾಣಿಸಿಕೊಂಡಿದ್ದು, ಆತನನ್ನು ಓಡಾಡಲು ಬಿಟ್ಟರೆ ಆತ ಕುಪ್ಪುಸ್ವಾಮಿಯನ್ನು ಸಂಪರ್ಕಿಸಬಹುದು, ಆಗ ಇಬ್ಬರನ್ನು ಒಟ್ಟಿಗೆ ಹಿಡಿಯಬಹುದೆಂಬುದು ಪೊಲೀಸರ ಪ್ಲಾನ್ ಆಗಿತ್ತು. ಶೃಂಗೇರಿ ಮತ್ತು ಕೊಪ್ಪದಲ್ಲಿ ನಕ್ಸಲೀಯರು, ಸರ್ಕಾರಿ ಕಚೇರಿಗಳಿಗೆ ಬಾಂಬ್ ಹಾಕಲು ಚಿಂತಿಸಿದ್ದರ ಬಗ್ಗೆ ಸುಳಿವು ಸಿಕ್ಕಿದ್ದರಿಂದ ರಮೇಶ್‌ನನ್ನು ಪೊಲೀಸರು ಬಂಧಿಸಿದರು.
ರಮೇಶ್ ಮತ್ತು ಆತನೊಂದಿಗೆ ಕೆಲವು ನಕ್ಸಲರು ಸೇರಿಕೊಂಡು ಸೆಪ್ಟೆಂಬರ್ ಅಂತ್ಯದಲ್ಲಿ ಶೃಂಗೇರಿ, ಕೊಪ್ಪ ತಾಲೂಕುಗಳಲ್ಲಿ ದುಷ್ಕೃತ್ಯ ನಡೆಸಲು ಸಿದ್ಧರಾಗಿದ್ದರು.
- ಅಣ್ಣಾಮಲೈ, ಎಸ್ಪಿ, ಚಿಕ್ಕಮಗಳೂರು.
ನಕ್ಸಲ್ ನಾಯಕ ರಮೇಶ್ ಪೊಲೀಸ್ ಕಸ್ಟಡಿ
ಚಿಕ್ಕಮಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಬಂಧಿತನಾದ ನಕ್ಸಲ್ ಮುಖಂಡ ರಮೇಶ್‌ನನ್ನು ವಿಚಾರಣೆಗಾಗಿ 10 ದಿನಗಳವರೆಗೆ ಚಿಕ್ಕಮಗಳೂರು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಣ್ಣಾಮಲೈ ತಿಳಿಸಿದ್ದಾರೆ. ರಮೇಶ್ ವಿರುದ್ಧ ಆಂಧ್ರಪ್ರದೇಶದಲ್ಲಿ 2, ರಾಯಚೂರಿನಲ್ಲಿ 19, ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ತಲಾ ಒಂದೊಂದು ಸೇರಿ ಒಟ್ಟು 22 ಪ್ರಕರಣಗಳು ದಾಖಲಾಗಿದೆ. ರಮೇಶನನ್ನು ಬೆಂಗಳೂರಿನ ಜೆಪಿ ನಗರದಲ್ಲಿ ಬಂಧಿಸಲಾಯಿತು ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
2006ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಇತ್ತೀಚೆಗೆ ಶೃಂಗೇರಿಯಲ್ಲಿ ದೊರೆತ ನಕ್ಸಲ್ ಕರಪತ್ರಗಳು ಹಾಗೂ ಬ್ಯಾನರ್‌ಗಳ ಪ್ರಕರಣದಲ್ಲಿಯೂ ಈತನ ಕೈವಾಡವಿದೆ. ರಾತ್ರಿ ಅರಣ್ಯದಲ್ಲಿ ತಂಗಲು ಬಳಸುವ ಪದಾರ್ಥಗಳು ಸೇರಿದಂತೆ ವಿವಿಧ ಪರಿಕರಗಳು ಆತನಲ್ಲಿ ದೊರೆತಿವೆ. ಕೆಲವೊಂದು ಆಯುಧಗಳನ್ನು ಅರಣ್ಯದಲ್ಲಿ ಬಚ್ಚಿಟ್ಟಿರುವುದಾಗಿ ರಮೇಶ್ ಹೇಳಿದ್ದಾನೆ ಎಂದು ಸಹ ಎಸ್ಪಿ ವಿವರಿಸಿದರು.
