ವಿರಾಜಪೇಟೆ[ಏ.25]: ಕೊಡಗಿನಲ್ಲಿ ಇಬ್ಬರು ಶಂಕಿತ ಉಗ್ರರು ಪ್ರತ್ಯಕ್ಷರಾಗಿದ್ದು, ಮನೆಗಳಿಗೆ ನುಗ್ಗಿ ಅಕ್ಕಿ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಆತಂಕಕಾರಿ ಘಟನೆ ಜಿಲ್ಲೆಯ ತಡಿಯಂಡಮೋಳ್ ಬೆಟ್ಟ ತಪ್ಪಲಿನಲ್ಲಿ ನಡೆದಿದೆ.

ನಗರದ ಯವಕಪಾಡಿ ಗ್ರಾಮದಲ್ಲಿ ಶಂಕಿತ ಇಬ್ಬರು ನಕ್ಸಲರು ಕಾಣಿಸಿಕೊಂಡಿದ್ದಾರೆ. ಸುಮಾರು 30 ವರ್ಷ ಪ್ರಾಯದ ಓರ್ವ ಮಹಿಳೆ ಮತ್ತು ಪುರುಷರ ತಂಡ ಕುಟ್ಟಪ್ಪ ಅವರ ಮನೆಗೆ ನುಗ್ಗಿ ಅಕ್ಕಿಯನ್ನು ಹೊತ್ತುಕೊಂಡು ಹೋಗಿದ್ದಾರೆ. ಇನ್ನು ಅರುಣ್ ಎನ್ನುವವರ ಮನೆಗೆ ನುಗ್ಗಿ ಮನೆಯವರನ್ನು ಬೆದರಿಸಿ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ವಿರಾಜಪೇಟೆ ತಾಲೂಕಿನ ಯವಕವಾಡಿ ಗ್ರಾಮಕ್ಕೆ ಕೊಡಗು ಪೊಲೀಸ್, ಎಎನ್ಎಫ್ ಪಡೆ ದೌಡಾಯಿಸಿದ್ದು ಗ್ರಾಮಸ್ಥರ ಬಳಿ ಮಾಹಿತಿ ಪಡೆದಿದ್ದಾರೆ. ನಕ್ಸಲರ ಡಿಢೀರ್ ಪ್ರತ್ಯಕ್ಷ ಸುದ್ದಿ ತಿಳಿದ ಬೆಟ್ಟದ ತಪ್ಪಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.