ಇಟಾನಗರ/ನವದೆಹಲಿ: ಸೋಮವಾರ ಮಧ್ಯಾಹ್ನ ಕಾಣೆಯಾದ ಭಾರತೀಯ ವಾಯುಪಡೆಯ ರಷ್ಯಾ ನಿರ್ಮಿತ ಎಎನ್‌-32 ವಿಮಾನದ ಶೋಧ ಕಾರ್ಯಾಚರಣೆಗೆ ಇದೀಗ ನೌಕಾಪಡೆ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಧುಮುಕಿವೆ. 

8 ಮಂದಿ ವಿಮಾನ ಸಿಬ್ಬಂದಿ ಹಾಗೂ ಐವರು ಯೋಧರನ್ನು ಹೊತ್ತೊಯ್ಯುತ್ತಿದ್ದ ರಷ್ಯಾ ನಿರ್ಮಿತ ಎಎನ್‌-32 ಸೋಮವಾರ ಟೇಕಾಫ್‌ ಆದ ಅರ್ಧಗಂಟೆಯಲ್ಲೇ ಸಂಪರ್ಕ ಕಡಿದುಕೊಂಡು ಕಣ್ಮರೆಯಾಗಿತ್ತು. 

ಹೀಗಾಗಿ, ಅರುಣಾಚಲ ಪ್ರದೇಶದ ಮೆಚುಕಾ ಹಾಗೂ ಅಸ್ಸಾಂನ ಜೊರ್ಹಾಟ್‌ ಪ್ರದೇಶಗಳ ನಡುವಿರುವ ಅರಣ್ಯ ಪ್ರದೇಶದಲ್ಲಿ ನೌಕಾಪಡೆಗೆ ಸೇರಿದ ಪಿ 8ಐ ವಿಮಾನವು ಆಪ್ಟಿಕಲ್‌ ಹಾಗೂ ಇನ್ಫ್ರಾ ರೆಡ್‌ ಸೆನ್ಸಾರ್‌ ತಂತ್ರಜ್ಞಾನವನ್ನು ಬಳಸಿ ಎಎನ್‌-32 ವಿಮಾನದ ಹುಡುಕಾಟವನ್ನು ನಡೆಸುತ್ತಿದೆ. 

ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ವಾಯುಪಡೆ ವಕ್ತಾರ, ‘ನಿಯಂತ್ರಣ ಕೇಂದ್ರದ ಸಂಪರ್ಕ ಕಡಿದುಕೊಂಡು ಕಾಣೆಯಾಗಿರುವ ಎಎನ್‌-32 ವಿಮಾನದ ಶೋಧಕ್ಕಾಗಿ ಎರಡು ಎಂಐ-17 ಹಾಗೂ ಒಂದು ಎಎಲ್‌ಎಚ್‌ ಹೆಲಿಕಾಪ್ಟರ್‌ ಅನ್ನು ನಿಯೋಜಿಸಲಾಗಿದೆ. ಅಗತ್ಯಬಿದ್ದಲ್ಲಿ ಹೆಚ್ಚಿನ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ’ ಎಂದಿದ್ದಾರೆ.