ಕರ್ತಾರ್‌ಪುರ ಸಾಹಿಬ್‌ ಕಾರಿಡಾರ್‌ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಗೈರಾಗಿದ್ದ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು, ಪಾಕಿಸ್ತಾನದ ಕಡೆಯಿಂದ ನಡೆಯುವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ

ನವದೆಹಲಿ/ ಲಾಹೋರ್‌: ಪಾಕಿಸ್ತಾನ ಗಡಿಯಲ್ಲಿರುವ ಐತಿಹಾಸಿಕ ಗುರುದ್ವಾರ ದರ್ಬಾರ್‌ಗೆ ಭಾರತದಿಂದ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಸಾಹಿಬ್‌ ಕಾರಿಡಾರ್‌ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಗೈರಾಗಿದ್ದ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು, ಪಾಕಿಸ್ತಾನದ ಕಡೆಯಿಂದ ನಡೆಯುವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಗುರುದಾಸ್‌ಪುರದಲ್ಲಿರುವ ಡೇರಾ ಬಾಬಾ ನಾನಕ್‌ಗೆ ಸಂಪರ್ಕಿಸುವ 4 ಕಿ.ಮೀ. ಉದ್ದದ ಮಾರ್ಗಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಬುಧವಾರ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಭಾರತೀಯ ಸಿಖ್‌ ಯಾತ್ರಿಕರಿಗೆ ವೀಸಾ ಇಲ್ಲದೇ ಗುರುದ್ವಾರಕ್ಕೆ ಈ ಮಾರ್ಗ ಸಂಪರ್ಕ ಕಲ್ಪಿಸಲಿದೆ. ಈಗಾಗಲೇ ಲಾಹೋರ್‌ಗೆ ತೆರಳಿರುವ ಸಿಧು ಶಂಕು ಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದೇ ವೇಳೆ ಕರ್ತಾರ್‌ಪುರ ಕಾರಿಡಾರ್‌ ಅನಂತ ಸಾಧ್ಯತೆಗಳನ್ನು ತೆರದಿಟ್ಟಿದೆ. ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಹಗೆತನವನ್ನು ದೂರ ಮಾಡಿ ಶಾಂತಿ ಸ್ಥಾಪನೆಗೆ ನೆರವಾಗಲಿದೆ ಎಂದು ಸಿಧು ಬಣ್ಣಿಸಿದ್ದಾರೆ. ಕಾರಿಡಾರ್‌ ಅನ್ನು ಸಾಕಾರ ಗೊಳಿಸಿದ್ದಕ್ಕೆ ಇಮ್ರಾನ್‌ ಖಾನ್‌ಗೆ ಕೃತಜ್ಞತೆ ಸಲ್ಲಿಸಿರುವ ಸಿಧು, ಇಮ್ರಾನ್‌ ಖಾನ್‌ ಮೂರು ತಿಂಗಳ ಹಿಂದೆ ನೆಟ್ಟಬೀಜ ಇದೀಗ ಸಸಿಯಾಗಿದೆ ಎಂದು ಹೇಳಿದ್ದಾರೆ.

3 ತಿಂಗಳ ಹಿಂದೆ ಪಾಕ್‌ ಪ್ರಧಾನಿ ಪ್ರಮಾಣ ವಚನ ಸಮಾರಂಭಕ್ಕೆ ತೆರಳಿದ್ದ ವೇಳೆ ನೂತನ ಪ್ರಧಾನಿ ಇಮ್ರಾನ್‌ ಖಾನ್‌ ಬಳಿ, ಕರ್ತಾರ್‌ಪುರ ಮಾರ್ಗ ಆರಂಭಕ್ಕೆ ಸಿಧು ಮನವಿ ಮಾಡಿದ್ದರು. ಅದಕ್ಕೆ ಇಮ್ರಾನ್‌ ಸ್ಪಂದಿಸಿದ್ದರು. ಆದರೆ ಇದೇ ಕಾರ್ಯಕ್ರಮದಲ್ಲಿ ಪಾಕ್‌ ಸೇನಾ ಮುಖ್ಯಸ್ಥ ಬಜ್ವಾ ಅವರನ್ನು ಸಿಧು ಅಪ್ಪಿಕೊಂಡಿದ್ದು ಭಾರತದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.